ಕೋಸಳ್ಳಿ ಫಾಲ್ಸ್ (Kosalli Falls)

ನಾನು ಸಾಮಾನ್ಯವಾಗಿ ನನ್ನೆಲ್ಲ ಬೆಂಗಳೂರಿನ ಗೆಳೆಯರು ಮಾತನಾಡುವುದನ್ನ ಕೇಳಿದ್ದೇನೆ.ಅವರೇನಾದರೂ ಬೆಂಗಳೂರಿನಿಂದ ಈ ನಮ್ಮ ಮಲೆನಾಡು ಅಥವಾ ಕರಾವಳಿ ಭಾಗಕ್ಕೆ ಪ್ರಯಾಣ ಬೆಳೆಸುವದಾದರೆ ಮೊದಲನೆಯದಾಗಿ ಅವರು ಬೆಟ್ಟಿ ನೀಡುವ ಫಾಲ್ಸ್ ಎಂದರೆ ಜೋಗ ಫಾಲ್ಸ್ ಮತ್ತೆ ಸುಮಾರು ಬೀಚ್ ಗಳು ಅಷ್ಟೇ. ಜೋಗ ಫಾಲ್ಸ್ ನಮ್ಮ ಮಲೆನಾಡಿನ ಪ್ರವಾಸಿ ತಾಣದಲ್ಲಿ ಒಂದು..ಅದರಲ್ಲಿ ಯಾವುದೇ ಸಂದೇಹ ಇಲ್ಲ.ಆದರೆ ಜೊತೆಗೆ ಈ ಮಲೆನಾಡಿನ ಅರಣ್ಯಗಳಲ್ಲಿ ಅದೆಷ್ಟೋ ಹಳ್ಳಕೊಳ್ಳಗಳು ಝರಿ ಗಳು ಇವೆಯೆಂದರೆ ಒಂದೆರಡು ವಾರದಲ್ಲಿ ನೋಡಿ ಮುಗಿಸಲು ಅಸಾಧ್ಯ. ಅಂತದ್ದೇ ಒಂದು ಫಾಲ್ಸ್ ಗೆ ನಾನು ಹೋದಾಗ ನನಗೆ ಆದ ಅನುಭವ ವನ್ನ ನಾನಿಲ್ಲಿ ಹೇಳೋಕೆ ಬಯಸುತ್ತೇನೆ.ಅದರಿಂದ ಇತರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿ ನೀಡಿ ಪ್ರಕೃತಿ ಸೌಂದರ್ಯವನ್ನ ನೋಡಲಿ ಅನ್ನೋದು ನನ್ನ ಉದ್ದೇಶ.

Click Here for more Pics : ಕೋಸಳ್ಳಿ ಫಾಲ್ಸ್ (Kosalli Falls) Photo Gallery.

ಕೋಸಳ್ಳಿ ಫಾಲ್ಸ್ , ಕೆಲವರು ತೂದಳ್ಳಿ ಫಾಲ್ಸ್ ಅಂತ ಕೂಡ ಕರೆಯುವದುಂಟು. ಏನ್ ಎಚ್ ೧೭ ಮೇನ್ ರೋಡ್ ಅಲ್ಲಿ ಸಿಗುವ ಶೀರೂರಿನ ಒಳಗೆ ಸುಮಾರು ೧೫ ರಿಂದ ೧೬ ಕಿ ಮೀ ದೂರ ದಲ್ಲಿ ಕೋಸಳ್ಳಿ ಅನ್ನೋ ಗ್ರಾಮ ಇದೆ .ಅಲ್ಲಿಂದ ಸುಮಾರು ೫ ಕಿ ಮೀ ದೂರದಲ್ಲಿ ಈ ಅದ್ಭುತವಾದ ಜಲಪಾತ ನಿಮಗೆ ನೋಡಸಿಗುತ್ತದೆ. ಆದರೆ ೨ ಕಿ ಮೀ ಟ್ರೆಕಿಂಗ್ ದಾರಿಯನ್ನ ನೀವು ಕ್ರಮಿಸಬೇಕಾಗತ್ತೆ . ಈ ಅರಣ್ಯಭಾಗವೆಲ್ಲ ಕುದುರೆಮುಖ ವನ್ಯಜೀವಿ ವಲಯ ಕಾರ್ಕಳಕ್ಕೆ ಸೇರುತ್ತದೆ. ಈ ಅಭಯಾರಣ್ಯಕ್ಕೆ ಮೂಕಾಂಬಿಕಾ ಅಭಯಾರಣ್ಯ – ಕೊಡಚಾದ್ರಿ ಬೆಟ್ಟ ಅಂತ ಕರೆಯುವದು ಉಂಟು. ದಾರಿಯುದ್ದಕ್ಕೂ ಅನೇಕಾನೇಕ ರಬ್ಬರ್ ಪ್ಲಾಂಟೇಶನ್ ಅನ್ನು ನೋಡುವದು ಕಣ್ಣಿಗೆ ಒಂತರ ಖುಷಿ ಕೊಡುವ ಇನ್ನೊಂದು ಸಂಗತಿ .

ನಾವು ಬೆಟ್ಟದ ಸಮೀಪಕ್ಕೆ ತಲುಪುವಾಗ ಮಧ್ಯಾನ್ಹ ಸುಮಾರು ೧೨ ಗಂಟೆ. ಆದರೆ ನಿಜವಾಗಿಯೂ ಇದು ಚಿಕ್ಕವರಿಗೆ ,ಮಹಿಳೆಯರಿಗೆ ಟ್ರೆಕಿಂಗ್ ಮಾಡಲು ಒಳ್ಳೆಯ ಸಮಯವಲ್ಲ. ಬೆಳಿಗ್ಗೆ ೬ ರಿಂದ ೭ ಗಂಟೆಯ ಸಮಯದಲ್ಲಿ ಟ್ರೆಕಿಂಗ್ ಶುರು ಮಾಡಿದರೆ ನಿಮಗೆ ಅಷ್ಟೊಂದು ದಣಿವಾಗದು ಅನ್ನೋದು ನನ್ನ ಅನಿಸಿಕೆ . ಅಲ್ಲಿಂದ ನಾವು ಪ್ರವೇಶ ಶುಲ್ಕವನ್ನ ತೆಗೆದುಕೊಂಡು ,ಫಾರೆಸ್ಟ್ ಗಾರ್ಡ್ಸ್ ಹತ್ರ ಸ್ವಲ್ಪ ಮಾಹಿತಿ ಪಡೆದು ನಮ್ಮ ಪ್ರಯಾಣ ಆರಂಭಿಸಿದೆವು. ಸುಮಾರು ೨೦೦ ಮೀಟರ್ ಕ್ರಮಿಸಿದ ನಂತ್ರ ಇದ್ದಕ್ಕಿದ್ದಂತೆ ದಟ್ಟ ಕಾಡು. ನನಗೇನೋ ಇತಿಹಾಸದ ಪುಸ್ತಕದಲ್ಲಿ ಓದಿದ ಹಾಗೆ ಅಮೆಜಾನ್ ಕಾಡನ್ನು ಪ್ರವೇಶಿಸಿದ ಅನುಭವ . ನಾನು ಮೊದಲು ಹೇಳಿದ ಹಾಗೆ ೧೨ ಗಂಟೆಗೆ ನಾವು ಪ್ರಯಾಣ ಪ್ರಾರಂಭಿಸಿದ್ದರಿಂದ ಬಿಸಿಲಿನ ದಗೆ ಹೇಗಿರತ್ತೆ ಅಂತ ನೀವು ಊಹಿಸಲು ಸಾದ್ಯ ಇಲ್ಲಿ . ಆದರೆ ನಾವು ಯಾವಾಗ ಆ ದಟ್ಟಡವಿಯನ್ನ ಹೊಕ್ಕೆವೋ ಆವಾಗ ನಮಗೆ ಎಲ್ಲೊ ಇಲ್ಲೋ ಬಿಸಿಲಿನ ಅನುಭವ ಆಗುತಿತ್ತು ಅಷ್ಟೇ . ಅಷ್ಟು ದಟ್ಟ ಕಾಡು.. ಎಂತಹ ವಿಚಿತ್ರ ಅಲ್ಲವಾ ..? ಅದಕ್ಕೆ ನಾನು ಜಾಸ್ತಿ ಪ್ರಯಾಣವನ್ನ ಬಯಸೋದು ,ಹೊಸ ಹೊಸ ಅನುಭವ ಹೊಸ ಹೊಸ ಪಾಠವನ್ನ ಇಂತ ಪ್ರಯಾಣ ನಮಗೆ ತೋರಿಸುತ್ತದೆ . ನೀವು ಘೋರಾಕಾರ ಅರಣ್ಯದಲ್ಲಿ ಟ್ರೆಕಿಂಗ್ ಮಾಡಿದ್ದವರಾದರೆ ಅದರ ಅನುಭವ ನಿಮಗೆ ಮೊದಲೇ ಇರುತ್ತದೆ. ನಾನೇನು ಅದನ್ನ ಪುನಃ ಹೇಳಬೇಕೆಂದಿಲ್ಲ. ವನ್ಯಜೀವಿಗಳ ಕೂಗು ,ಪಕ್ಷಿಗಳ ಕಲರವ ಇದನ್ನೆಲ್ಲಾ ಹತ್ತಿರದಿನದ ಗ್ರಹಿಸುವದು ಇದೆಲ್ಲ ಮನಸ್ಸಿಗೆ ಮುದ ನೀಡುವಂತ ಕ್ಷಣಗಳು.

ಹಾಗೆ ಬೆಟ್ಟದಲ್ಲಿ ಎಂತೆಂತ ಮರಗಳು ಎಷ್ಟೋ ವರ್ಷಗಳಿಂದ ಬೆಳೆದು ನಿಂತು ಹೆಮ್ಮರವಾಗು ಬೆಟ್ಟದಲ್ಲಿ ಚಲಿಸುವ ಪ್ರಯಾಣಿಕನಿಗೆ ಭಯಪಡಿಸುವ ಅನುಭವ ಆಗೋದಂತು ಸುಳ್ಳಲ್ಲ. ಆ ಎರಡು ಕಿ ಮೀ ಕಾಡಿನ ಪ್ರಯಾಣದ ನಂತರ ಕೊನೆಗೂ ತೂದಳ್ಳಿ ಫಾಲ್ಸ್ ಸನಿಹ ತಲುಪಿದೆವು. ಕಲ್ಲು ಬಂಡೆಗಳ ನಡುವೆ ಹರಿಯುವ ಆ ಜಲಧಾರೆಯನ್ನ ನೋಡಿ ನನಗಂತೂ ಏನು ಮಾಡಬೇಕು ಅನ್ನೋದೇ ಅರ್ಥ ಆಗಲಿಲ್ಲ . ಮುಂದಿನ ಕ್ಷಣವೇ ನಾವು ಆ ಝರಿಯ ನೀರಿನಲ್ಲಿ ಕುಳಿತು ನಮ್ಮ ಆಯಾಸವನ್ನ ದೂರಮಾಡಿಕೊಂಡೆವು. ನಂಬಲು ಅಸಾಧ್ಯವಾದ ಅನುಭವ . ಆ ನೀರಿನ ತಾಜಾತನಕ್ಕೆ ನೀವು ಎಷ್ಟೇ ದಣಿದಿದ್ದರು ಅದೆಲ್ಲ ಮಾಯವಾಗುವದಂತು ನಿಜ . ಆ ಬೆಟ್ಟದಿಂದ ಹರಿವ ನೀರಲ್ಲಿ ಅಷ್ಟೊಂದು ಔಷದಿಯ ಗುಣ ಹೇಗೆ ಬರುತ್ತದೆ ಅನ್ನೋ ಜಾಡು ಹಿಡಿದು ಹೋದರೆ ನಮಗೆ ನಮ್ಮ ವೇದ ಪುರಾಣಗಳು ಹೇಳಿದ್ದು ಶತ ಪ್ರತೀಶತ ಸತ್ಯ ಅನ್ನೋದು ಮನವರಿಕೆ ಆಗುತ್ತದೆ. ಸ್ವಚ್ಚಂದವಾಗಿ ಹರಿಯುವ ನೀರಿನ ಕೆಳಗೆ ಕೂತು ದೂರದ ಬೆಟ್ಟವನ್ನ ವೀಕ್ಷಣೆ ಮಾಡುತ್ತ ಇದ್ದರೆ ನಮನ್ನೆ ನಾವು ಮರೆಯೋದಂತು ಖಂಡಿತ.

ನಾನು ಇದನ್ನ ಯಾಕೆ ಹೇಳ್ತ ಇರೋದು ಅಂದ್ರೆ ನಮ್ಮ ಆಧುನಿಕತೆ ಬೆಳೆದ ಹಾಗೆ ನಮ್ಮ ಪರಿಸರವನ್ನ ಮಾನವ ಹಾಳುಗೆಡವಿದ್ದು ಉಂಟು. ಪ್ರಕೃತಿಯ ಮಡಿಲಲ್ಲಿರೋ ಇಂತಹ ಅದ್ಬುತವನ್ನ ಕಾಪಾಡಿಕೊಂಡು ಹೋಗುವದು ನಮ್ಮೆಲ್ಲ ರ ಕರ್ತವ್ಯ . ನಮ್ಮ ಊರು ನಮ್ಮ ನಾಡು ನಮ್ಮ ಹೆಮ್ಮೆ .ಅದನ್ನ ಕಾಪಾಡಲು ನಾವು ಯಾವಾಗಲು ಸಿದ್ಧರಾಗಿರಬೇಕು.ಹಾಗೆ ಇಂತಹ ಪ್ರವಾಸಿ ತಾಣವನ್ನ ಹಾಳುಮಾಡುವ ಯಾವುದೇ ಕುಕೃತ್ಯ ಕಂಡುಬಂದಲ್ಲಿ ನಾವು ಎಚ್ಛೆತ್ತುಕೊಳ್ಳಬೇಕು . ಈ ಸುಂದರ ಫಾಲ್ಸ್ ಕೂಡ ಒಂದು ಸುಂದರ ಪ್ರವಾಸಿ ಸ್ಥಳದಲ್ಲಿ ಒಂದಾಗಬೇಕು ಎನ್ನುವದೇ ನನ್ನ ಆಶಯ .

ನಿಮ್ಮ ಸಂಚಾರಿ ಮಿತ್ರ..

Leave a Reply

Your email address will not be published.