ವನ್ನಳ್ಳಿ ಬೀಚ್ (Vannalli Beach)

ಸೂರ್ಯದೇವ ತನ್ನ ಅಂದಿನ ಕಾರ್ಯಮುಗಿಸಿ ಪಡುವಣ ಶರಧಿಯಲ್ಲಿ ಮೀಯುವ ತವಕ ಎಂಬಂತೆ ಕಡಲಂಚಿಗೆ ಸಾಗಿದ್ದ .ರವಿಯ ಕೆಂಬಣ್ಣದ ಓಕುಳಿ ಬಾನಲ್ಲಿ ತುಂಬಿ ತನ್ನ ತೆಕ್ಕೆಗೆ ಬಂದ ಎಲ್ಲವನ್ನು ಕೆಂಪಾಗಿಸಿತ್ತು .ಪಕ್ಷಿಗಳೆಲ್ಲ ತಮ್ಮ ಮನೆ ಮಕ್ಕಳು ನೆನಪಾಗಿ ತಾಮುಂದೆ ತಾಮುಂದೆ ಎಂಬ ಪೈಪೋಟಿಗೆ ಇಳಿದಂತೆ ಬಾನಿಗೆ ಹಾರಹಾಕಿದಂತೆ ವೇಗವಾಗಿ ಹಾರುತ್ತಿದ್ದವು .ಇತ್ತ ಕಡಲರಾಜ ಸೂರ್ಯನ ಆಗಮನಕ್ಕೆ ಸರ್ವತಯಾರಿ ನಡೆಸಿದಂತಿತ್ತು . ಶರಧಿಯ ನೀರು ಕೆಂಪು ಹಳದಿ ಮಿಶ್ರಿತವಾಗಿ ತೆರೆ ನೊರೆಯಾಗಿ ಕುಣಿದು ಕುಪ್ಪಳಿಸಿ ದಡ ಸೇರಿ ಮರಳು ಬೆಳಕು ನೆರಳಿನಾಟ ಅವ್ಯಾಹತವಾಗಿ ನಡೆದಿತ್ತು ..

Click Here for more Pics : ವನ್ನಳ್ಳಿ ಬೀಚ್ (Vannalli Beach) Photo Gallery.

ಕ್ಷಮಿಸಿ , ನಾನು ಏನು ಹೇಳಬೇಕೆಂದು ಬಯಸಿ ಈ ಲೇಖನ ಆರಂಭಿಸಿದೆನೋ ಅದೇ ಮರೆತು ಹೋಯಿತು . ಇಂತಹ ಮನಮೋಹಕ ದೃಶ್ಯ ಕಂಡು ಬಂದಿದ್ದು ಬೇರೆಲ್ಲಿಯೂ ಅಲ್ಲ .ಕುಮಟಾದ ವನ್ನಳ್ಳಿ ಬೀಚ್ ನಲ್ಲಿ. ನಮ್ಮನ್ನ ಸುಮಾರ ೨೦೦ ವರ್ಷ ಆಳಿದ ಬ್ರಿಟಿಷರ ಕಾಲದಿಂದಲೂ ವ್ಯಾಪಾರ ವಹಿವಾಟು ಹಡಗು ನಿಲುಗಡೆ ಗೆ ಹೆಡ್ ಬಂದರ್ ಎಂದೇ ಹೆಸರಾಗಿರುವ ಈ ನಮ್ಮ ವನ್ನಳ್ಳಿ ಬೀಚ್ ನಮ್ಮ ಊರು ಕುಮಟಾದ ಹೆಮ್ಮೆಯ ಪ್ರವಾಸಿ ತಾಣಗಳಲ್ಲಿ ಒಂದು.

ನೀವು ಈ ಬೀಚ್ ಗೆ ಹೋಗುವಾಗ ನಿಮಗೆ ಒಂದು ಚಿಕ್ಕ ಬ್ರಿಡ್ಜ್ ಸಿಗುತ್ತದೆ .ಆ ಬ್ರಿಡ್ಜ್ ಗು ಕೂಡ ತುಂಬಾ ಮಹತ್ವದ ಇತಿಹಾಸವಿದೆ .ಸಮುದ್ರದ ನೀರು ಒಳನುಗ್ಗಿ ಕೊಡಿಯಾಗಿ ಅಳ್ವೆದಂಡೇ ,ಶಶಿಹಿತ್ಲ ಹೀಗೆ ಈ ಊರಿನ ಮದ್ಯೆ ಹರಿದು ವನ್ನಳ್ಳಿ ಯನ್ನ ಬೇರ್ಪಡಿಸಿತ್ತು .ವನ್ನಳ್ಳಿ ಗೆ ಹೋಗಬೇಕೆಂದರೆ ಸಶಿಹಿತ್ತಲದ ಮುಂದೆ ಕೊಡಿ (ನೀರು ತುಂಬಿದ ಹಳ್ಳ) ದಾಟಿಯೇ ಹೋಗಬೇಕಿತ್ತು .ಇದರಿಂದ ಅಂದಿನ ಆಡಳಿತಗಾರರಿಗೆ ತುಂಬಾ ತಲೆ ನೋವು ಎನ್ನಿಸಿತ್ತು . ಆ ಹಳ್ಳಕ್ಕೆ ಅಂದಿನ ಬ್ರಿಟಿಷ್ ಸರ್ಕಾರ ಡಿಸೆಂಬರ್ ೧೮೭೯ ರಲ್ಲಿ ಸೇತುವೆ ನಿರ್ಮಿಸುವ ಕಾರ್ಯವನ್ನ ಮುನ್ಸಿಪಾಲಿಟಿ ಛೇರ್ಮನ್ ಈ..ಮೆಕೆಂಝಿಯೇ ಎನ್ನುವ ಇಂಜಿನಿಯರ್ ಗೆ ವಹಿಸಿತ್ತು . ಅವರು ಆ ಕೆಲಸವನ್ನು ಡಿಸೆಂಬರ್ ೧೮೭೯ ರಲ್ಲಿ ಪ್ರಾರಂಭಿಸಿ ಮೇ ೧೮೮೦ ರಲ್ಲಿ ಯಶಸ್ವಿಯಾಗಿ ಮುಗಿಸಿರುತ್ತಾರೆ. ಅದಕ್ಕೆ ಅಂದು ತಗುಲಿದ ವೆಚ್ಚ ಕೇವಲ ೪೪೦೦ ರೂಪಾಯಿ . ಇಂದಿನ ಕೋಟಿಗಟ್ಟಲೆ ಖರ್ಚಿನ ಬ್ರಿಡ್ಜ್ ಗಳು ಹತ್ತಾರುವರ್ಷಗಳಿಗೆ ಮುಪ್ಪುಬಂದು ಬೆಪ್ಪಾಗಿ ಉರುಳಿದ ಉದಾಹರಣೆ ಇವೆ. ಆದರೆ ಈ ನಮ್ಮ ವನ್ನಳ್ಳಿ ಬ್ರಿಡ್ಜ್ ಸರಿಸುಮಾರು ೧೪೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ . ಇಲ್ಲಿ ನಾವು ಅಂದಿನ ಅಧಿಕಾರಿಯ ಕಾರ್ಯವೈಖರಿಯನ್ನು ಖಂಡಿತ ಪ್ರಶಂಶಿಸಬೇಕು .

ಕಡಲ ನೀರಿನ ಮಂದ ಅಲೆಗಳು ದಡಕ್ಕಪ್ಪಳಿಸಿ ನಾನಿಂತಲ್ಲಿ ಬಂದು ಹಿಂದಿರುಗುವಾಗ ಪಾದದ ಬುಡದಲ್ಲಿನ ಮರಳನ್ನು ಕೊರೆದು ಕಚಕುಳಿ ಇಡುವಾಗಲೇ ವಾಸ್ತವ್ಯಕ್ಕೆ ಬಂದೆ . ಕೆಲ ಬೆಸ್ತರು ಕಡಲ ನೀರಿನ ನಡುವಲ್ಲಿ ನಿಂತು ಬಲೆಬೀಸಿ ಅಂದಿನ ತುತ್ತಿನ ಚೀಲ ತುಂಬಿಕೊಡು ಎಂದು ಕುಬೇರನನ್ನು ಕೇಳುವಂತಿತ್ತು .

ಈ ಪ್ರಕ್ರತಿ ಮಾತೆ ನಮಗೆ ಏನೆಲ್ಲ ನೀಡಿದೆ . ಇಂದಿನ ನಾಗರೀಕತೆಯ ಕೆಲಸದ ಒತ್ತಡಗಳು ,ಸಂಸಾರದ ಬಿಡುಗುಗಳು ,ವ್ಯಾವಹಾರಿಕ ಚಿಂತನೆಗಳು ವಾಮನ ಬಲಿಯನ್ನು ತುಳಿದಂತೆ ತುಳಿಯುತಿದ್ದರೂ ಸರ್ವಜೀವಿಗಳ ತಾಯಿ ಪ್ರಕೃತಿ ಮಡಿಲಲ್ಲಿ ಕಾಲಕಳೆದರೆ ಚಿಂತೆದೂರಾಗಿ ನವ ಚೈತನ್ಯ ಮೂಡುವಲ್ಲಿ ಎರಡು ಮಾತಿಲ್ಲ.

ಸಂಚಾರಿ ಮಿತ್ರ.

Leave a Reply

Your email address will not be published.