ಇದು ಕೂಡ ಒಂತರ ಹಠಾತ್ತಾಗಿ ಪ್ಲಾನ್ ಆಧ ಟ್ರಿಪ್ ಅಂತಾನೆ ಹೇಳಬಹುದು . ಪ್ಲಾನ್ ಆಗಿದ್ದು ಕೇವಲ ಗೋವಿಂದ ತೀರ್ಥ ಮತ್ತು ಹತ್ತಿರದ ದೇವಸ್ಥಾನಕ್ಕೆ ಹೋಗಿ ಬರುವುದು ಅಂತ . ಆ ದೇವಸ್ಥಾನದ ಸ್ಥಾನದ ಹೆಸರು ಕೂಡ ಅಲ್ಲಿಗೆ ಹೋಗುವವರಿಗೆ ಗೊತ್ತಿರಲಿಲ್ಲ ನನಗೆ. ನಿಜ ಹೇಳಬೇಕೆಂದರೆ ನಮ್ಮ ಅಣ್ಣನಿಗೂ ಆ ದೇವಸ್ಥಾನದ ಬಗ್ಗೆ ಗೊತ್ತಿರಲಿಲ್ಲ ಅಂದೆನಿಸುತ್ತದೆ . ಹತ್ತಿರದಲ್ಲಿರುವ ಅಣ್ಣನ ಸ್ನೇಹಿತ ನ್ನು ಕರೆದುಕೊಂಡು ಅವನ ಸಲಹೆಯೊಂದಿಗೆ ಹೋಗೋಣ ಎನ್ನುವುದು ಅವನ ಉಪಾಯ. ಆದರೆ ಅಲ್ಲಿ ಹೋಗಿ ಬರುವ ವೇಳೆ ನಾನು ಮತ್ತು ಅಣ್ಣ ಕೊಲ್ಲೂರು ,ಹಾಲಾಡಿ ರಿವರ್ ಮತ್ತು ಸೋಮೇಶ್ವರ ಬೀಚ್ ಗಳನ್ನು ಕೂಡ ಕವರ್ ಮಾಡಿದೆವು.
ಬೆಳಿಗ್ಗೆ ೬ ಗಂಟೆಗೆ ನಮ್ಮ ಪ್ರಯಾಣ ಆರಂಭಿಸಿದೆವು .ನನ್ನೂರು ಕುಮಟಾ ಆದ್ದರಿಂದ ಬೈಂದೂರ್ ಹೋಗಬೇಕು ಅಂದರೆ ಹೊನ್ನಾವರ ,ಮುರ್ಡೇಶ್ವರ ,ಭಟ್ಕಳ ಇವೆಲ್ಲ ಊರುಗಳನ್ನು ದಾಟಿ ಹೋಗಬೇಕಾಗುತ್ತದೆ. ಸರಿಯಾಗಿ ೬. ೩೦ . ಆಗ ನಾವು ಹೊನ್ನಾವರ ಶರಾವತಿ ಬ್ರಿಜ್ ಕ್ರಾಸ್ ಮಾಡ್ತಾ ಇದ್ವಿ . ಎಂತ ಅದೃಷ್ಟ ,ಅದೇ ಸಮಯಕ್ಕೆ ಸೂರ್ಯೋದಯದ ಸುಂದರ ದ್ರಶ್ಯ ನಮ್ಮಕಣ್ಮುಂದೆ. ಹಾಗೆ ಹೋಗ್ತಾ ನಾನು ವಿಡಿಯೋ ಕೂಡ ತೆಗೆದುಕೊಂಡೆ. ಸೂರ್ಯನ ಹೊಂಗಿರಣಗಳು ನಮ್ಮ ಮೇಲೆ ಬೀಳ್ಬೇಕಾದರೆ ನನ್ನಲಿ ಏನೋ ಒಂತರ ಸಂತೋಷ. ಏನೋ ಹೊಸ ಚೈತನ್ಯ ಅಂತಾನೆ ಹೇಳ್ಬಹುದು. ನೀವು ಆ ದ್ರಶ್ಯವನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದು.
ಹಾಗೆ ಪ್ರಯಾಣ ಮುಂದುವರೆಸಿ ಸುಮಾರು ೯ ಗಂಟೆ ಹೊತ್ತಿಗೆ ಅಣ್ಣನ ಸ್ನೇಹಿತನ ಮನೆ ತಲುಪಿದೆವು. ಲೈಟ್ ಆಗಿ ಟೀ ತಿಂಡಿ ಮಾಡಿ ಮತ್ತೆ ಅಲ್ಲಿಂದ ಗೋವಿಂದ ತೀರ್ಥದ ಕಡೆ ನಮ್ಮ ಪ್ರಯಾಣ ಮುಂದುವರೆಸಿದೆವು. ಇಲ್ಲೊಂದು ವಿಷಯ ನಾನು ಹೇಳಲೇಬೇಕು. ಮೊದಲೇ ಹೇಳಿದ ಹಾಗೆ ಅಣ್ಣನ ಸ್ನೇಹಿತನ ಸಹಾಯದೊಂದಿದೆ ಅಲ್ಲಿ ಹೋಗಬೇಕೆನ್ನುವುದು ನಮ್ಮ ಪ್ಲಾನ್. ಯಾಕಂದರೆ ಆ ಸ್ಥಳ ನಮಗೆ ಅಪರಿಚಿತ. ಆದರೆ ಅಲ್ಲಿ ಆಗಿದ್ದೆ ಬೇರೆ. ಅಣ್ಣನ ಸ್ನೇಹಿತನಿಗೂ ಆ ಸ್ಥಳ ಸರಿಯಾಗಿ ಗೊತ್ತಿರಲಿಲ್ಲ. ಅಲ್ಲಿ ನಮ್ಮ ಸಹಾಯಕ್ಕೆ ಬಂದವರು ಇನ್ನೊಬ್ಬ ವ್ಯಕ್ತಿ. ಅವ್ರು ಅಣ್ಣನ ಸ್ನೇಹಿತನ ಭಾವ. ನಿಜವಾಗಿಯೂ ನಮಗೆ ದಾರಿಯುದ್ದಕ್ಕೂ ದಿಕ್ಷುಚಿಯಂತೆ ಕೆಲಸ ಮಾಡಿದರು ಅವರು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರು ಅದು ಕಡಿಮೆ.
ಸ್ವಲ್ಪವೇ ಸಮಯದಲ್ಲಿ ನಾವು ಯಾವುದೊ ದಟ್ಟ ಕಾಡುಗಳ ಅಂಚಲ್ಲಿ ಇದ್ದೆವು .ದೂರದಲ್ಲಿ ಕಾಣುತ್ತಿರುವ ಗುಡ್ಡಬೆಟ್ಟಗಳು ,ಕಿರಿದಾದ ಕಾಲು ದಾರಿ ಇದನ್ನೆಲ್ಲಾ ನೋಡಿ ನನಗೆ ಒಂದು ಕ್ಷಣ ಎಲ್ಲಿ ಇದ್ದೇನೆ ಅನ್ನೋದೇ ಗೊತ್ತಾಗದಂತಾಯಿತು. ನಂತರ ನಮ್ಮ ಮಿತ್ರನನ್ನು ಕೇಳಿದಾಗ ಅವರು ಹೇಳಿದರು,ನಾವು ಹೋಗಬೇಕಾಗಿರುವದು ಆ ಗುಡ್ಡದ ಕೆಳಗೆ ಅಂತ.ಆ ಕ್ಷಣಕ್ಕೆ ನಾ ಅಂದುಕೊಂಡೆ ಗುಡ್ಡದ ಕೆಳಗೆ ತಾನೇ ಆರಾಮಾಗಿ ಹೋಗಬಹುದು ಅಂತ. ನಂತರ ಗೊತ್ತಾಯಿತು ಇದು ಒಂದು ಟ್ರೆಕಿಂಗ್ ಪ್ಲೇಸ್ , ೨ ಕಿಲೋಮೀಟರು ಹತ್ತಬೇಕು ಅಂತ.
ನಾವು ಹೊರಟ್ಟಿದ್ದು ಕೊಡಚಾದ್ರಿಯ ಇನ್ನೊಂದು ಅಂಚಿನಲ್ಲಿರುವ ಒಂದು ಪವಿತ್ರ ಸ್ಥಳಕ್ಕೆ ಆಗಿತ್ತು. ಅದೇ ಗೋವಿಂದ ತೀರ್ಥ ಅಂತ ಕರೆಯಲ್ಪಡುವ ಸ್ಥಳ. ಆ ಬೆಟ್ಟದಲ್ಲಿ ಹತ್ತಬೇಕಾದರೆ ನನ್ನ ಅವಸ್ಥೆ ಯಾರಿಗೂ ಬೇಡ. ಆದರೆ ಇದೊಂದು ಒಳ್ಳೆಯ ಅನುಭವ ನಿಜ ಹೇಳಬೇಕು ಅಂದ್ರೆ. ಮತ್ತೆ ನನಗೆ ಅಲ್ಲಿ ತಿಳಿದು ಕೊಳ್ಳೋದು ತುಂಬನೆ ಇದೆ ಅನ್ನಿಸ್ತು. ಅಲ್ಲಿ ಯಾವುದೇ ದಾರಿ ಇಲ್ಲ. ದಾರಿಹೋಕರು ಮಾಡಿಕೊಂಡ ಕಾಡಿನ ದಾರಿ ಮಾತ್ರ.ಅದರಲ್ಲೇ ಪ್ರಯಾಣ ಮುಂದುವರೆಸಿದೆವು. ಅಲ್ಲಿ ನಂಗೆ ಇನ್ನೊಂದು ವಿಷಯ ಗಮನಕ್ಕೆ ಬಂತು. ಬೆಂಗಳೂರಿನ ಜೀವನಕ್ಕೂ ಮತ್ತು ಹಳ್ಳಿಯ ಜೀವನದ ವ್ಯತ್ಯಾಸದ ಅರಿವು .ಸ್ವಲ್ಪವೇ ಸ್ವಲ್ಪ ನಡೆದು ನಾನು ಸುಸ್ತಾಗಿ ಕುಳಿತುಕೊಳ್ಳುವಾಗ, ನನ್ನ ಓವರ್ಟೇಕ್ ಮಾಡಿಕೊಂಡು ಹೆಂಗಸರು ಮಕ್ಕಳು ಹೋಗುವಾಗ ಅಣ್ಣನ ಹತ್ತಿರ ಕೇಳಿದೆ. ಇದು ಹೇಗೆ ಸಾಧ್ಯ ಅಂತ. ಅವನು ಮುಗುಳ್ನಗುತ್ತ ಹೇಳಿದ ಸಿಂಪಲ್ ಅವರ ಜೀವನಶೈಲಿ ಮತ್ತು ಆಹಾರ ಇದೆಲ್ಲ ಅವರನ್ನ ಇಷ್ಟೊಂದು ಸ್ಟ್ರಾಂಗ್ ಮಾಡಿದೆ ಅಂತ. ನಿಜ ಅಂತ ಅನ್ನಿಸಿತು ನನಗೆ .ಒಂದು ಕ್ಷಣ ಮನ್ನಸ್ಸಿಗೆ ಬೇಸರವೂ ಅನ್ನಿಸಿತು. ನನ್ನ ಹಳ್ಳಿ ಚೆನ್ನಾಗಿದೆ ಅದನ್ನೆಲ್ಲ ಬಿಟ್ಟು ನಾವು ಬೆಂಗಳೂರಿನಲ್ಲಿ ಆಧುನಿಕತೆಯ ಮದ್ಯದಲ್ಲಿ ಸಿಲುಕಿ ಒದ್ದಾಡುತಿದ್ದೇನೆ ಅಂತ ಅನ್ನಿಸಿತು. ಆದರೆ ಜೀವನ ನೇ ಹೀಗೆ .ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ…
ಅದೇನೇ ಇರಲಿ ಛಲಬಿಡದೆ ಅಂತೂ ಇಂತೂ ಮಾಡಿ ನಾವು ಕೊನೆಗೂ ಆ ಗುಡ್ಡದ ಕೆಳಗೆ ತಲುಪಿದೆವು .ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಕಡಿದಾದ ಗುಡ್ಡದ ಮೇಲಿಂದ ಚಿಲುಮೆ ಸುರಿಯುತ್ತಿತ್ತು.. ಆ ಗುಡ್ಡದ ಮೇಲಿಂದ ದೂರದಲ್ಲಿ ಚಿಕ್ಕದಾಗಿ ಕಾಣುತ್ತಿರುವ ಗಿರಿ ಕಾಡು ಊರು ಎಲ್ಲವೂ ನೋಡೋಕೆ ಏನೋ ಒಂತರ ಆನಂದ ಉಂಟು ಮಾಡುತಿತ್ತು. ಈ ಕೆಳಗಿನ ಲಿಂಕ್ ನಲ್ಲಿ ನೀವು ಆ ರಮಣೀಯ ಸೌಂದರ್ಯವನ್ನು ವೀಕ್ಷಿಸಬಹುದು. ಮೇಲ್ಗಡೆಯಿಂದ ಸುರಿಯುವ ನೀರು ಆ ಬಿಸಿಲಿನ ಧಗೆಗೆ ಏನೋ ಒಂತರ ಹಿತ ನೀಡುತಿತ್ತು .ನಿಜ ಹೇಳಬೇಕು ಅಂದರೆ ಇದೊಂದು ಬೇರೆ ತರದ ಅನುಭವ. ಅದಕ್ಕೆ ಇರಬಹುದು ಇದನ್ನು ತೀರ್ಥ ಅಂತ ಕರೆಯೋದು. ಇಂತಹ ಅನುಭವ ನಿಮಗೆ ಎಲ್ಲೇ ಹೋದರು ಸಿಗಲಾರದು.
ಅಲ್ಲಿಂದ ಬರಲಿಕ್ಕೆ ಮನಸ್ಸಿಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು .ದಾರಿಯಲ್ಲಿ ಬರಬೇಕಾದರೆ ಯಾರೋ ನಮ್ಮನ್ನು ಕೂಗಿ ಮಜ್ಜಿಗೆ ವ್ಯವಸ್ಥೆ ಮಾಡಿದ್ದೇವೆ ಕೆಳಗೆ.ಹೋಗಿ ದಯವಿಟ್ಟು ಕುಡಿಯಿರಿ ಎಂದರು. ನಮಗೆ ಅಷ್ಟೇ ಬೇಕಾಗಿತ್ತು. ಗಡಿಬಿಡಿಯಿಂದ ಕೆಳಗೆ ಬಂದು ಮೊದಲು ಮಜ್ಜಿಗೆ ಕುಡಿದೆವು. ಅಬ್ಬಾ, ದಣಿವಾರಿಸಿಕೊಳ್ಳಲು ಸಹಾಯ ಮಾಡಿದ ಆ ವ್ಯಕ್ತಿಗೆ ನಮ್ಮ ಧನ್ಯವಾದ ಹೇಳಿ ಅಲ್ಲಿಂದ ಹೊರಟೆವು .
ನಂತರ ನಮ್ಮ ಪ್ರಯಾಣ ಮೂಡ್ಲುಗಲ್ಲು ಕೇಶವ ನಾಥ ಸ್ವಾಮಿ ದೇವಾಲಯದ ಕಡೆಗೆ ಹೊರಟಿತು . ಈ ದೇವಾಲಯದಲ್ಲೊಂದು ವಿಶೇಷತೆ ಇದೆ .ಸುಮಾರು ೧೦೦ ಫೀಟ್ ದೂರ ಗುಹೆಯಲ್ಲಿ ದೇವರ ಮೂರ್ತಿ ಇದೆ. ಗುಹೆ ಯಲ್ಲಿ ನೀರು ಇದೆ.ಭಕ್ತರು ನೀರಿನಲ್ಲಿ ನಡೆದುಕೊಂಡು ಹೋಗಬೇಕು.ನೀವು ಕೆಳಗಿನ ಚಿತ್ರದಲ್ಲಿ ನೋಡಿದರೆ ನಿಮಗೆ ಅದರ ಕಲ್ಪನೆ ಬರಬಹುದು.
ಇದು ಒಂದು ಯುನಿಕ್ ಅಂತಾನೆ ಹೇಳಬಹುದು. ಇಂತಹ ದೇವಸ್ಥಾನ ಇದೆ ಮೊದಲ ಬಾರಿಗೆ ನಾ ನೋಡಿದ್ದು.ದೇವರ ದರ್ಶನ ಪಡೆದ ನಮಗೆ ಅಲ್ಲಿ ಆ ದಿನ ಜಾತ್ರೆ ಇದ್ದದ್ದು ತಿಳಿದು ಬಂತು. ಹಾಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇದ್ದುದರಿಂದ ಅಲ್ಲೇ ಊಟ ಮಾಡಿ ನಮ್ಮ ಪ್ರಯಾಣ ಮುಂದುವರೆಸಿದೆವು.
ದಾರಿಯಲ್ಲಿ ಹಾಲಡಿ ಹತ್ತಿರ ದಾರಿಯಲ್ಲಿ ಹೋಗಬೇಕಾದರೆ ಒಂದು ನದಿ ಇರುವದು ಗೊತ್ತಾಯಿತು. ಅಲ್ಲಿ ಕಾರ್ ಅನ್ನು ನಿಲ್ಲಿಸಿ ನದಿಗೆ ದುಮುಕಿದೆವು.. ಅಲ್ಲಿನ ಪ್ರಕೃತಿ ಸೌಂದರ್ಯ ವನ್ನ ನನ್ನ ಮಾತಿನಲ್ಲಿ ಕೇಳುವದಕಿಂತ ಚಿತ್ರದಲ್ಲಿ ನೋಡಿದರೆ ಇನ್ನು ಚೆನ್ನಾಗಿರತ್ತೆ.
ನಂತರ ಸ್ವಲ್ಪ ಸಮಯ ಅಲ್ಲಿ ಕಳೆದು ಅಣ್ಣನ ಸ್ನೇಹಿತರನ್ನು ಅವರ ಮನೆಗೆ ಬಿಟ್ಟು ಅವರಿಗೆಲ್ಲ ಧನ್ಯವಾದ ಹೇಳಿ ಅಲ್ಲಿಂದ ಕೊಲ್ಲೂರು ಕಡೆಗೆ ಹೊರಟೆವು.
ಮೊದಲ ಬಾರಿಗೆ ನಾನು ಕೊಲ್ಲೂರು ಹೋಗುತ್ತಾ ಇರುವದು. ದೇವಸ್ಥಾನ ತುಂಬಾ ಚೆನ್ನಾಗಿದೆ.ನಾವು ಹೋಗಿದ್ದು ಸುಮಾರು ೪ ಗಂಟೆ ಸಮಯ ಆದುದರಿಂದ ಜಾಸ್ತಿ ಭಕ್ತಾದಿಗಳು ಇರಲಿಲ್ಲ. ತಾಯಿ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ನಾವು ತಡಮಾಡದೆ ಮನೆ ಕಡೆಗೆ ಹೊರಟೆವು.
ಆಗ ೫ ಗಂಟೆ ಸಮಯ. ಹತ್ತಿರದಲ್ಲೇ ಇರುವ ಸೋಮೇಶ್ವರ ಬೀಚ್ ಅಲ್ಲಿ ಸನ್ಸೆಟ್ ವೀಕ್ಷಣೆ ಮಾಡಬೇಕೆನ್ನುವ ಪ್ಲಾನ್ ನಮ್ಮದು . ಸರಿಯಾಗಿ ೬ ಗಂಟೆ ಹೊತ್ತಿಗೆ ಸೋಮೇಶ್ವರ ಬೀಚ್ ತಲುಪಿದ ನಾವು ಮೊದಲು ಸೋಮೇಶ್ವರ ದೇವಸ್ಥಾನ ಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡೆವು. ನಂತರ ಬೀಚ್ ನಲ್ಲಿ ಕೂತು ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡು ಸನ್ಸೆಟ್ ಗಾಗಿ ಕಾಯುತ್ತ ಕುಳಿತೆವು. ಅಂದೇ ನಾನು ಅಷ್ಟೊಂದು ತಾಳ್ಮೆಯಿಂದ ಕಾದಿದ್ದು ಅನ್ನಿಸುತ್ತದೆ .ಆ ನನ್ನ ತಾಳ್ಮೆ ನನಗೆ ತುಂಬಾ ಒಳ್ಳೆಯ ಅನುಭವವನ್ನ ತಂದಿತ್ತು ಆದಿನ . ಯಾಕೆ ಅಂತ ಕೇಳಬೇಡಿ. ನಾನು ತೆಗೆದಂತ ಈ ಚಿತ್ರಣಗಳೇ ಅದಕ್ಕೆ ಸಾಕ್ಷಿ.
ಅಲ್ಲಿಗೆ ನಮ್ಮ ಪ್ರವಾಸ ಮುಕ್ತಾಯವಾಯಿತು. ದಾರಿಯುದ್ದಕ್ಕೂ ಏನೇನೊ ಯೋಚನೆ. ಈ ನಮ್ಮ ಪ್ರವಾಸದಲ್ಲಿ ಎಷ್ಟೊಂದು ಜನರನ್ನ ಭೇಟಿ ಮಾಡಿದೆವು,ಎಷ್ಟೊಂದು ಸ್ಥಳಕ್ಕೆ ಬೆಟ್ಟಿ ಕೊಟ್ಟೆವು .ಎಲ್ಲದರಲ್ಲೂ ಒಂದೊಂದು ವಿಭಿನ್ನತೆ ಇದೆ ಅಂತ ನಂಗೆ ಅನ್ನಿಸಿತು. ಅದಲ್ಲದೆ ನಮಗೆ ದಿಕ್ಷುಚಿಯಂತೆ ಸಹಾಯ ಮಾಡಿದ ಆ ವ್ಯಕ್ತಿ ,ಮತ್ತೆ ಪಾನಕ ವಿತರಣೆ ಮಾಡಿದವರು ಇವರೆಲ್ಲ ಯಾವ ಉದ್ದೇಶದಿನಂದ ನಮಗೆ ಸಹಾಯ ಮಾಡಿದರು ಅನ್ನೋ ಯೋಚನೆ ನನ್ನ ಮನಸ್ಸಿನಲ್ಲಿ. ಅದಕ್ಕೆಲ್ಲ ಉತ್ತರವನ್ನು ನಾನೇ ಹುಡುಕಿಕೊಂಡೆ.ಅದೇ ಮನುಷ್ಯತ್ಯ. ಅವರಲ್ಲಿರುವ ಒಳ್ಳೆ ಮನಸ್ಸು ಇದೆಲ್ಲವನ್ನು ಅವರಿಂದ ಮಾಡಿಸಿತು ಅಂತ. ಇಂದಿನ ಕಾಲದಲ್ಲಿ ಹಣವಿಲ್ಲದೆ ಒಂದು ಲೋಟ ನೀರು ಕೊಡೋಕೆ ಹಿಂದೆ ಮುಂದೆ ನೋಡೋರ ಮದ್ಯ ನನ್ನಂತ ಅಪರಿಚಿತರಿಗೆ ಇಷ್ಟೊಂದು ಆದರದಿಂದ ಸತ್ಕರಿಸಿದ ಎಲ್ಲರೂ ನನ್ನ ಮಿತ್ರರು.ನಿಜವಾದ ಸಂಚಾರಿ ಮಿತ್ರರು.
ನಿಮ್ಮ ಸಂಚಾರಿ ಮಿತ್ರ.
Super article and nice memoriable experience.keep writing new travel experiences good 👌
Thank you, Viraj, Appreciate your response to our Article.Again thanks for your suggestion.