ಸೆಪ್ಟೆಂಬರ್ 15, 2018, ಆಗ ನಾನು ನನ್ನೂರಿನಲ್ಲಿ ಇದ್ದೆ. ನಾನು ಕೆಲಸ ಮಾಡುವುದು ಬೆಂಗಳೂರಿನಲ್ಲಿ. ಎರಡು ದಿನ ರಜೆ ಸಿಕ್ಕರೆ ಊರ್ ಕಡೆ ಹೋಗುವುದು ನನ್ನ ರೂಡಿ. ಈ ಸಲ ಗಣೇಶಚತುರ್ಥಿ ರಜೆ ಬೇರೆ. ನನ್ ತರಾನೇ ನನ್ ಫ್ರೆಂಡ್ಸ್ ಕೂಡ ಊರಲ್ಲಿ ಇದ್ದರು . ಈ ಆಧುನಿಕ ಜೀವನದಿಂದ ಬೇಸತ್ತಿರುವ ನಮಗೆ ಎಲ್ಲಾದರೂ ಹೋಗೋಣ ಎಂಬ ಯೋಚನೆ ಬಂತು.
ಗೋಕರ್ಣ… ನನ್ನೂರಿನಿಂದ 32.1 KM ದೂರ. ಬೆಳ್ಳಂಬೆಳಿಗ್ಗೆ ಬೈಕ್ ಹತ್ತಿ ಗೋಕರ್ಣದ ಕಡೆ ಹೊರಟೆವು. ದಾರಿ ಮಧ್ಯೆ ಸಾಣಿಕಟ್ಟೆ ಎನ್ನುವ ಊರು ಸಿಗುತ್ತದೆ. ಇಲ್ಲಿ ಬ್ರಿಟಿಷ್ ಕಾಲದಿಂದಲೂ ಉಪ್ಪು ತಯಾರಿಕೆ ಮಾಡುತ್ತಿದ್ದರೆಂದು ಕೇಳಿದ್ದೇನೆ. ಹಾಗೆ ಇಲ್ಲಿ ಹಳೆ ಕಾಲದ ಕಟ್ಟಡದ ನಿಶಾನೆ ಕಾಣಸಿಗುತ್ತದೆ. ಗೋಕರ್ಣ ತಲುಪಿ ಶ್ರೀ ಮಹಾಬಲೇಶ್ವರನ ದರ್ಶನ ಮಾಡಿದ ನಮಗೆ ಮುಂದೆ ನೆನಪಿಗೆ ಬಂದದ್ದು ಕುಡ್ಲೆ ಮತ್ತು ಓಂ ಬೀಚ್ ಗಳು.
ಕರ್ನಾಟಕದ ಈ ನೆಲ ಪುಣ್ಯ ಕ್ಷೇತ್ರವಲ್ಲದೆ ದೇಶ-ವಿದೇಶಗಳಲ್ಲಿ ಹೆಸರು ಪಡೆದ ಬೀಚ್ ಗಳನ್ನು ಇಲ್ಲಿ ಪ್ರಕೃತಿ ಮಾತೆ ಅಣಿಗೊಳಿಸಿದ್ದಾಳೆ. ಕಣ್ಣು ಹಾಯಿಸಿದುದ್ದಕ್ಕೂ ನೀರಿನ ರಾಶಿ . ಬಿಳಿಗೆರೆಯ ದಡದಲ್ಲಿ ಮೇಲೇರಿ ಕೆಳ ನುಸುಳಿ ನರ್ತಕಿಯರನ್ನು ನಾಚಿಸಿ ನಲಿವ ಮೋಹಕ ತೆರೆಗಳು, ಸಾಗರದ ಮೇಲಿಂದ ಬೀಸಿ ಬರುವ ತಂಗಾಳಿ ಮೈ ಸೋಕಿದಾಗ ಇಲ್ಲಿಗೆ ಬಂದ ಪ್ರಯಾಣಿಗ ತನ್ನನ್ನು ತಾನೇ ಮೈಮರೆಯುವುದು ಸಹಜ. ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರ ವಾಗುತ್ತಿರುವ ನಮಗೆ ಜೀವ ಜಗತ್ತಿನ ಪರಿಚಯ ಮಾಡಿಕೊಡುವುದು ಇಂಥ ಸ್ಥಳಗಳು.
ಬೆಂಗಳೂರಿನಿಂದ 484.6 KM ದೂರ ಇರುವ ಈ ಸ್ಥಳಕ್ಕೆ ವಾರದ ಎರಡು ದಿನದ ರಜೆಯಲ್ಲಿ ಕೂಡ ಭೇಟಿ ನೀಡಬಹುದಾದಂತಹ ಎಲ್ಲಾ ಸೌಲಭ್ಯವಿದೆ. ಬೆಂಗಳೂರ್ ಅಲ್ಲದೆ ಬೇರೆ ಕಡೆಯಿಂದ ಬರುವವರಿಗೂ ವಾಹನದ ಸೌಲಭ್ಯ ತುಂಬಾನೇ ಇದೆ..
ಅಂದಿನ ಅನುಭವ ಇಂದಿಗೂ ಮರೆಯಲಾಗದಂತದ್ದು. ಮನಸ್ಸಿನ ಅನೇಕ ಗೊಂದಲಗಳಿಂದ ದೂರವಾಗಿ ಧನ್ಯತಾ ಭಾವನೆ ಮನದಲ್ಲಿ ನೆಲೆಸಿದ ಗಳಿಗೆ ಅದು. ತಿಂಗಳಿಗೆ ಒಮ್ಮೆಯಾದರೂ ಇಂತಹ ಪ್ರವಾಸಿ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎನ್ನುವುದು ನನ್ನ ಅನಿಸಿಕೆ.
ನಿಮ್ಮ ಸಂಚಾರಿ ಮಿತ್ರ…
Click Here for more Pics : ಗೋಕರ್ಣ ( Gokarna ) Photo Gallery.