ಚತುರ್ಮುಖ ಜೈನ ಬಸದಿ ( Chaturmukha Jaina Basadi )

ನಾ ಈಗ ಪ್ರಯಾಣ ಹೊರಟಿರುವ ಸ್ಥಳದ ಇತಿಹಾಸದ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇಲ್ಲ ,ನಿಜ ಹೇಳಬೇಕು ಎಂದರೆ ಇಂತಹ ಪ್ರವಾಸಿ ಸ್ಥಳ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೆ ಎಂದು ಗೊತ್ತೇ ಇರಲಿಲ್ಲ ನನಗೆ . ಹೀಗೆ ಒಂದು ದಿನ ಬೈಕ್ ಹತ್ತಿ ನಾವು ಶರಾವತಿ ತೂಗುಸೇತುವೆಯ ಕಡೆಗೆ ಹೊರಟೆವು .ನಂತರ ಅಲ್ಲಿಂದ ಮುಂದೆ ಒಂದು ಬಸದಿ ಇದೆ ,ತುಂಬಾ ಹಳೆ ಕಾಲದ ಬಸದಿ ಎನ್ನುವ ವಿಷಯ ನಮಗೆ ಗೊತ್ತಾಯ್ತು.

ಹೀಗೆ ಶುರುವಾಗಿದ್ದ ಪ್ರಯಾಣ ಕೊನೆಗೆ ಗೇರುಸೊಪ್ಪದ ಚತುರ್ಮುಖ ಜೈನ ಬಸದಿಯ ವರೆಗೆ ತಲುಪಿತು.ಶರಾವತಿ ತೂಗುಸೇತುವೆಯನ್ನು ದಾಟಿ ಯಾವುದೊ ರೋಡ್ ಅಲ್ಲಿ ಹೊಕ್ಕಿ ಎಲ್ಲೊ ಹೊರಬಿದ್ದು ನಾವು ಕೊನೆಗೆ ತಲುಪಿದ್ದು ಹೊನ್ನಾವರ -ಗೇರುಸೊಪ್ಪದ ಅರಣ್ಯ ವಿಭಾಗದ ಕರ್ನಲ್ ಪೀಟನ್ ಪ್ಲಾಟ್ ಹತ್ತಿರ .

ಅಂದರೆ ನನಗೆ ಅಲ್ಲಿ ಕಂಡುಬಂದ ಬೋರ್ಡ್ ಅದು .ನಾವೇನು ಅವರ ಪ್ಲಾಟ್ ಹೊಕ್ಕಿಲ್ಲ ಬಿಡಿ .ಅದಕ್ಕೂ ಮುಂಚೆ ಶರಾವತಿ ನದಿಗೆ ಸಂಬಂದಿಸಿದ ಹಳ್ಳ ದಾಟುವ ಸಾಹಸವೆಲ್ಲ ಮಾಡಿದ್ದೇವೆ .ಆದರೆ ನೀವೇನಾದರೂ ಹಳ್ಳದ ಆಚೆ ಹೋಗಬೇಕೆಂದರೆ ಇನ್ನೊಂದು ಹಳೆಯ ತೂಗುಸೇತುವೆ ಇದೆ . ಈತರದ ಸಾಹಸ ಬೇಕೆಂದೇನಿಲ್ಲ .ನನಗೆ ಆ ಚಿಕ್ಕ ತೂಗು ಸೇತುವೆಯ ಬಗ್ಗೆ ತಿಳಿದದ್ದು ಹಳ್ಳ ದಾಟಿ ಆದ ಮೇಲೆ . ನಮ್ಮ ಬೈಕ್ ಪ್ರಯಾಣ ಈ ಹಳ್ಳದ ವರೆಗೆ ಕೊನೆಗೊಳ್ಳುತ್ತದೆ .ನಂತ್ರ ನಡೆದುಕೊಂಡೇ ಹೋಗ್ಬೇಕು .ನನ್ನ ಎಲ್ಲ ಹಳೆಯ ಪ್ರಯಾಣದ ತರ ಕಾಡಿನ ಮಾರ್ಗ ಇಲ್ಲೂ ಕೂಡ ಸಾಮಾನ್ಯ . ಆ ಕಾಡಿನ ಪಕ್ಷಿ ಪ್ರಾಣಿಗಳ ಸದ್ದು ಕೇಳುತ್ತ ನಮ್ಮ ಪ್ರಯಾಣ ಮುಂದುವರೆಯಿತು .ಅಲ್ಲೇ ನನಗೆ ಕಂಡು ಬಂದಿದ್ದು ಈ ಕರ್ನೆಲ್ ಪೀಟನ್ ಪ್ಲಾಟ್ ಅನ್ನೋ ಬೋರ್ಡ್ .ಹಾಗೆ ಮುಂದಕ್ಕೆ ಸ್ವಲ್ಪ ನಡೆದುಕೊಂಡು ಹೋದಾಗ ಒಂದು ಅದ್ಬುತ ಸ್ಥಳ ನಮ್ಮ ಕಣ್ಮುಂದೆ .ಅದೇ ಚತುರ್ಮುಖ ಜೈನ ಬಸದಿ .

ನನಗೆ ನಿಜವಾಗಿಯೂ ಆ ಸ್ಥಳದ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ .ಅಲ್ಲಿ ನೀವು ಹೋದರೆ ಮಾತ್ರ ಆ ಸ್ಥಳ ಪರಿಚಯ ಮತ್ತು ಅದರ ವೈಶಿಷ್ಟತೆ ತಿಳಿಯಲು ಸಾಧ್ಯ .ಆ. ಹಳೆ ಕಾಲದ ಕಂಬಗಳು ಜೈನ ಶಿಲ್ಪಗಳು ಎಲ್ಲವೂ ಅದ್ಬುತ .ಹಾಗೆ ಅಲ್ಲಿ ನಿಮಗೆ ಪ್ರಾಚೀನ ಲಿಪಿಯ ಪರಿಚಯವೂ ಆಗುತ್ತದೆ .ನಾನು ಸುಮ್ಮನೆ ಆ ಪ್ರಾಚೀನ ಲಿಪಿಯ ಕಂಬದ ಮೇಲೆ ಹಾಗೆ ಕೈ ಆಡಿಸಿದಾಗ ನನಗಂತೂ ಎನ್ನೋ ಒಂತರ ವಿಚಿತ್ರ ಅನುಭವ ಆಯ್ತು .ಆತರ ಲಿಪಿಯ ಕೆತ್ತನೆ ಮನಮೋಹಕ .

ಹಾಗೆ ಪಕ್ಕದಿಂದ ಮುಂದಕ್ಕೆ ನಡೆದರೆ ನಿಮಗೆ ಚತುರ್ಮುಖ ಬಸದಿಯ ಮಹಾದ್ವಾರ ನೋಡಸಿಗುತ್ತದೆ . ಯಾವ ಶಿಲ್ಪಿ ಈ ಬಸದಿಯನ್ನು ನಿರ್ಮಿಸಿದರೋ ಅವರ ಕಾರ್ಯ ಚಾತುರ್ಯವನ್ನು ಮೆಚ್ಚಲೇಬೇಕು .ಯಾವ ದಿಕ್ಕಿನಲ್ಲೇ ಹೋದರು ಒಂದೇ ಸಮನಾದ ವಿನ್ಯಾಸ . ಹೆಸರಿಗೆ ತಕ್ಕಂತೆ ಚತುರ್ಮುಖ ಬಸದಿಯೇ ಸರಿ . ಒಳಗಿನ ಕಂಬಗಳ ಕೆತ್ತನೆ ಇವೆಲ್ಲವೂ ಈಗಿನ ಯಾವುದೇ ಆದುನಿಕ ಯಂತ್ರಕ್ಕೂ ಕಮ್ಮಿ ಇಲ್ಲ .ಹಾಗೆ ಇದೆ .ಆ ಚಿಕ್ಕ ಬಾಗಿಲುಗಳು ,ದೇವರ ಮೂರ್ತಿಗಳು ಎಲ್ಲವೂ ನಮಗೆ ಹಿಂದಿನ ಕಾಲದ ಕಲಾ ಸಮೃದ್ಧಿಯನ್ನು ಪರಿಚಯಿಸುತ್ತದೆ . ಆತರ ಇದೆ ಈ ಬಸದಿಯ ಹಿರಿಮೆ ಗರಿಮೆ .ಅತ್ಯದ್ಭುತ . ಹೇಳ ಹೊರಟರೆ ತುಂಬಾ ಇದೆ ,ಅದಕ್ಕಿಂತ ಖುದ್ದಾಗಿ ಈ ಸ್ಥಳಕ್ಕೆ ಬೆಟ್ಟಿಕೊಟ್ಟು ನಮ್ಮ ಪ್ರಾಚೀನ ಸಂಸ್ಕ್ರತಿಯ ಮನವರಿಕೆ ಮಾಡಿಕೊಳ್ಳುವದರಲ್ಲಿ ಇನ್ನು ತುಂಬಾ ಹಿತವಿದೆ .

ನೀವೇನಾದರೂ ಚತುರ್ಮುಖ ಬಸದಿಗೆ ನೇರವಾಗಿ ಕಾರ್ ಅಥವಾ ಬೈಕ್ ಮೂಲಕ ತಲುಪಲು ಇಷ್ಟ ಪಟ್ಟರೆ ಇನ್ನೊಂದು ದಾರಿ ಕೂಡ ಇದೆ . ನಾನು ಮಾಡಿದ ಹಾಗೆ ಹಳ್ಳ ಕೊಳ್ಳ ದಾಟುವ ಅವಶ್ಯಕತೆಯೂ ಇಲ್ಲ .ಆ ಮಾರ್ಗ ನಮಗೆ ಸ್ವಲ್ಪ ದೂರ ಆದ್ದರಿಂದ ನಮ್ಮ ಹಳ್ಳ ದಾಟುವ ಸಾಹಸಕ್ಕೆ ಅರ್ಥವಿದೆ ಅಂತ ನಾನು ಭಾವಿಸುತ್ತೇನೆ .ಅದಲ್ಲದೆ ಪಕೃತಿಯ ನಡುವೆ ಒಂದಲ್ಲ ಒಂದು ಆಶ್ಚರ್ಯಕರವಾದ ಘಟನೆಗಳು ನಡೆಯುತ್ತಾ ಇರುತ್ತವೆ .ಹಾಗೆ ನನಗು ಒಂದು ವಿಶಿಷ್ಟ ಜಾತಿಯ ಅಳಿಲು ನೋಡುವ ಅದೃಷ್ಟ ಸಿಕ್ಕಿತು ಆದಿನ.

ಇಂತಹ ಪ್ರಾಚೀನ ಅದ್ಬುತ ಪ್ರವಾಸಿ ಸ್ಥಳಗಳನ್ನು ಒಳಗೊಂಡಿರುವ ಈ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು .ಸಮಯ ಸಿಕ್ಕಾಗ ಇಂತಹ ಪ್ರವಾಸಿ ಸ್ಥಳಗಳಿಗೆ ನೀವು ಬೆಟ್ಟಿ ನೀಡಬೇಕೆಂದು ಈ ಬರಹದ ಮೂಲಕ ಸಣ್ಣ ಕೋರಿಕೆ .

ನಿಮ್ಮ ಸಂಚಾರಿ ಮಿತ್ರ.

Click Here for more Pics : ಚತುರ್ಮುಖ ಜೈನ ಬಸದಿ ( Chaturmukha Jaina Basadi ) Photo Gallery.

ಕೋಸಳ್ಳಿ ಫಾಲ್ಸ್ (Kosalli Falls)

ನಾನು ಸಾಮಾನ್ಯವಾಗಿ ನನ್ನೆಲ್ಲ ಬೆಂಗಳೂರಿನ ಗೆಳೆಯರು ಮಾತನಾಡುವುದನ್ನ ಕೇಳಿದ್ದೇನೆ.ಅವರೇನಾದರೂ ಬೆಂಗಳೂರಿನಿಂದ ಈ ನಮ್ಮ ಮಲೆನಾಡು ಅಥವಾ ಕರಾವಳಿ ಭಾಗಕ್ಕೆ ಪ್ರಯಾಣ ಬೆಳೆಸುವದಾದರೆ ಮೊದಲನೆಯದಾಗಿ ಅವರು ಬೆಟ್ಟಿ ನೀಡುವ ಫಾಲ್ಸ್ ಎಂದರೆ ಜೋಗ ಫಾಲ್ಸ್ ಮತ್ತೆ ಸುಮಾರು ಬೀಚ್ ಗಳು ಅಷ್ಟೇ. ಜೋಗ ಫಾಲ್ಸ್ ನಮ್ಮ ಮಲೆನಾಡಿನ ಪ್ರವಾಸಿ ತಾಣದಲ್ಲಿ ಒಂದು..ಅದರಲ್ಲಿ ಯಾವುದೇ ಸಂದೇಹ ಇಲ್ಲ.ಆದರೆ ಜೊತೆಗೆ ಈ ಮಲೆನಾಡಿನ ಅರಣ್ಯಗಳಲ್ಲಿ ಅದೆಷ್ಟೋ ಹಳ್ಳಕೊಳ್ಳಗಳು ಝರಿ ಗಳು ಇವೆಯೆಂದರೆ ಒಂದೆರಡು ವಾರದಲ್ಲಿ ನೋಡಿ ಮುಗಿಸಲು ಅಸಾಧ್ಯ. ಅಂತದ್ದೇ ಒಂದು ಫಾಲ್ಸ್ ಗೆ ನಾನು ಹೋದಾಗ ನನಗೆ ಆದ ಅನುಭವ ವನ್ನ ನಾನಿಲ್ಲಿ ಹೇಳೋಕೆ ಬಯಸುತ್ತೇನೆ.ಅದರಿಂದ ಇತರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿ ನೀಡಿ ಪ್ರಕೃತಿ ಸೌಂದರ್ಯವನ್ನ ನೋಡಲಿ ಅನ್ನೋದು ನನ್ನ ಉದ್ದೇಶ.

Click Here for more Pics : ಕೋಸಳ್ಳಿ ಫಾಲ್ಸ್ (Kosalli Falls) Photo Gallery.

ಕೋಸಳ್ಳಿ ಫಾಲ್ಸ್ , ಕೆಲವರು ತೂದಳ್ಳಿ ಫಾಲ್ಸ್ ಅಂತ ಕೂಡ ಕರೆಯುವದುಂಟು. ಏನ್ ಎಚ್ ೧೭ ಮೇನ್ ರೋಡ್ ಅಲ್ಲಿ ಸಿಗುವ ಶೀರೂರಿನ ಒಳಗೆ ಸುಮಾರು ೧೫ ರಿಂದ ೧೬ ಕಿ ಮೀ ದೂರ ದಲ್ಲಿ ಕೋಸಳ್ಳಿ ಅನ್ನೋ ಗ್ರಾಮ ಇದೆ .ಅಲ್ಲಿಂದ ಸುಮಾರು ೫ ಕಿ ಮೀ ದೂರದಲ್ಲಿ ಈ ಅದ್ಭುತವಾದ ಜಲಪಾತ ನಿಮಗೆ ನೋಡಸಿಗುತ್ತದೆ. ಆದರೆ ೨ ಕಿ ಮೀ ಟ್ರೆಕಿಂಗ್ ದಾರಿಯನ್ನ ನೀವು ಕ್ರಮಿಸಬೇಕಾಗತ್ತೆ . ಈ ಅರಣ್ಯಭಾಗವೆಲ್ಲ ಕುದುರೆಮುಖ ವನ್ಯಜೀವಿ ವಲಯ ಕಾರ್ಕಳಕ್ಕೆ ಸೇರುತ್ತದೆ. ಈ ಅಭಯಾರಣ್ಯಕ್ಕೆ ಮೂಕಾಂಬಿಕಾ ಅಭಯಾರಣ್ಯ – ಕೊಡಚಾದ್ರಿ ಬೆಟ್ಟ ಅಂತ ಕರೆಯುವದು ಉಂಟು. ದಾರಿಯುದ್ದಕ್ಕೂ ಅನೇಕಾನೇಕ ರಬ್ಬರ್ ಪ್ಲಾಂಟೇಶನ್ ಅನ್ನು ನೋಡುವದು ಕಣ್ಣಿಗೆ ಒಂತರ ಖುಷಿ ಕೊಡುವ ಇನ್ನೊಂದು ಸಂಗತಿ .

ನಾವು ಬೆಟ್ಟದ ಸಮೀಪಕ್ಕೆ ತಲುಪುವಾಗ ಮಧ್ಯಾನ್ಹ ಸುಮಾರು ೧೨ ಗಂಟೆ. ಆದರೆ ನಿಜವಾಗಿಯೂ ಇದು ಚಿಕ್ಕವರಿಗೆ ,ಮಹಿಳೆಯರಿಗೆ ಟ್ರೆಕಿಂಗ್ ಮಾಡಲು ಒಳ್ಳೆಯ ಸಮಯವಲ್ಲ. ಬೆಳಿಗ್ಗೆ ೬ ರಿಂದ ೭ ಗಂಟೆಯ ಸಮಯದಲ್ಲಿ ಟ್ರೆಕಿಂಗ್ ಶುರು ಮಾಡಿದರೆ ನಿಮಗೆ ಅಷ್ಟೊಂದು ದಣಿವಾಗದು ಅನ್ನೋದು ನನ್ನ ಅನಿಸಿಕೆ . ಅಲ್ಲಿಂದ ನಾವು ಪ್ರವೇಶ ಶುಲ್ಕವನ್ನ ತೆಗೆದುಕೊಂಡು ,ಫಾರೆಸ್ಟ್ ಗಾರ್ಡ್ಸ್ ಹತ್ರ ಸ್ವಲ್ಪ ಮಾಹಿತಿ ಪಡೆದು ನಮ್ಮ ಪ್ರಯಾಣ ಆರಂಭಿಸಿದೆವು. ಸುಮಾರು ೨೦೦ ಮೀಟರ್ ಕ್ರಮಿಸಿದ ನಂತ್ರ ಇದ್ದಕ್ಕಿದ್ದಂತೆ ದಟ್ಟ ಕಾಡು. ನನಗೇನೋ ಇತಿಹಾಸದ ಪುಸ್ತಕದಲ್ಲಿ ಓದಿದ ಹಾಗೆ ಅಮೆಜಾನ್ ಕಾಡನ್ನು ಪ್ರವೇಶಿಸಿದ ಅನುಭವ . ನಾನು ಮೊದಲು ಹೇಳಿದ ಹಾಗೆ ೧೨ ಗಂಟೆಗೆ ನಾವು ಪ್ರಯಾಣ ಪ್ರಾರಂಭಿಸಿದ್ದರಿಂದ ಬಿಸಿಲಿನ ದಗೆ ಹೇಗಿರತ್ತೆ ಅಂತ ನೀವು ಊಹಿಸಲು ಸಾದ್ಯ ಇಲ್ಲಿ . ಆದರೆ ನಾವು ಯಾವಾಗ ಆ ದಟ್ಟಡವಿಯನ್ನ ಹೊಕ್ಕೆವೋ ಆವಾಗ ನಮಗೆ ಎಲ್ಲೊ ಇಲ್ಲೋ ಬಿಸಿಲಿನ ಅನುಭವ ಆಗುತಿತ್ತು ಅಷ್ಟೇ . ಅಷ್ಟು ದಟ್ಟ ಕಾಡು.. ಎಂತಹ ವಿಚಿತ್ರ ಅಲ್ಲವಾ ..? ಅದಕ್ಕೆ ನಾನು ಜಾಸ್ತಿ ಪ್ರಯಾಣವನ್ನ ಬಯಸೋದು ,ಹೊಸ ಹೊಸ ಅನುಭವ ಹೊಸ ಹೊಸ ಪಾಠವನ್ನ ಇಂತ ಪ್ರಯಾಣ ನಮಗೆ ತೋರಿಸುತ್ತದೆ . ನೀವು ಘೋರಾಕಾರ ಅರಣ್ಯದಲ್ಲಿ ಟ್ರೆಕಿಂಗ್ ಮಾಡಿದ್ದವರಾದರೆ ಅದರ ಅನುಭವ ನಿಮಗೆ ಮೊದಲೇ ಇರುತ್ತದೆ. ನಾನೇನು ಅದನ್ನ ಪುನಃ ಹೇಳಬೇಕೆಂದಿಲ್ಲ. ವನ್ಯಜೀವಿಗಳ ಕೂಗು ,ಪಕ್ಷಿಗಳ ಕಲರವ ಇದನ್ನೆಲ್ಲಾ ಹತ್ತಿರದಿನದ ಗ್ರಹಿಸುವದು ಇದೆಲ್ಲ ಮನಸ್ಸಿಗೆ ಮುದ ನೀಡುವಂತ ಕ್ಷಣಗಳು.

ಹಾಗೆ ಬೆಟ್ಟದಲ್ಲಿ ಎಂತೆಂತ ಮರಗಳು ಎಷ್ಟೋ ವರ್ಷಗಳಿಂದ ಬೆಳೆದು ನಿಂತು ಹೆಮ್ಮರವಾಗು ಬೆಟ್ಟದಲ್ಲಿ ಚಲಿಸುವ ಪ್ರಯಾಣಿಕನಿಗೆ ಭಯಪಡಿಸುವ ಅನುಭವ ಆಗೋದಂತು ಸುಳ್ಳಲ್ಲ. ಆ ಎರಡು ಕಿ ಮೀ ಕಾಡಿನ ಪ್ರಯಾಣದ ನಂತರ ಕೊನೆಗೂ ತೂದಳ್ಳಿ ಫಾಲ್ಸ್ ಸನಿಹ ತಲುಪಿದೆವು. ಕಲ್ಲು ಬಂಡೆಗಳ ನಡುವೆ ಹರಿಯುವ ಆ ಜಲಧಾರೆಯನ್ನ ನೋಡಿ ನನಗಂತೂ ಏನು ಮಾಡಬೇಕು ಅನ್ನೋದೇ ಅರ್ಥ ಆಗಲಿಲ್ಲ . ಮುಂದಿನ ಕ್ಷಣವೇ ನಾವು ಆ ಝರಿಯ ನೀರಿನಲ್ಲಿ ಕುಳಿತು ನಮ್ಮ ಆಯಾಸವನ್ನ ದೂರಮಾಡಿಕೊಂಡೆವು. ನಂಬಲು ಅಸಾಧ್ಯವಾದ ಅನುಭವ . ಆ ನೀರಿನ ತಾಜಾತನಕ್ಕೆ ನೀವು ಎಷ್ಟೇ ದಣಿದಿದ್ದರು ಅದೆಲ್ಲ ಮಾಯವಾಗುವದಂತು ನಿಜ . ಆ ಬೆಟ್ಟದಿಂದ ಹರಿವ ನೀರಲ್ಲಿ ಅಷ್ಟೊಂದು ಔಷದಿಯ ಗುಣ ಹೇಗೆ ಬರುತ್ತದೆ ಅನ್ನೋ ಜಾಡು ಹಿಡಿದು ಹೋದರೆ ನಮಗೆ ನಮ್ಮ ವೇದ ಪುರಾಣಗಳು ಹೇಳಿದ್ದು ಶತ ಪ್ರತೀಶತ ಸತ್ಯ ಅನ್ನೋದು ಮನವರಿಕೆ ಆಗುತ್ತದೆ. ಸ್ವಚ್ಚಂದವಾಗಿ ಹರಿಯುವ ನೀರಿನ ಕೆಳಗೆ ಕೂತು ದೂರದ ಬೆಟ್ಟವನ್ನ ವೀಕ್ಷಣೆ ಮಾಡುತ್ತ ಇದ್ದರೆ ನಮನ್ನೆ ನಾವು ಮರೆಯೋದಂತು ಖಂಡಿತ.

ನಾನು ಇದನ್ನ ಯಾಕೆ ಹೇಳ್ತ ಇರೋದು ಅಂದ್ರೆ ನಮ್ಮ ಆಧುನಿಕತೆ ಬೆಳೆದ ಹಾಗೆ ನಮ್ಮ ಪರಿಸರವನ್ನ ಮಾನವ ಹಾಳುಗೆಡವಿದ್ದು ಉಂಟು. ಪ್ರಕೃತಿಯ ಮಡಿಲಲ್ಲಿರೋ ಇಂತಹ ಅದ್ಬುತವನ್ನ ಕಾಪಾಡಿಕೊಂಡು ಹೋಗುವದು ನಮ್ಮೆಲ್ಲ ರ ಕರ್ತವ್ಯ . ನಮ್ಮ ಊರು ನಮ್ಮ ನಾಡು ನಮ್ಮ ಹೆಮ್ಮೆ .ಅದನ್ನ ಕಾಪಾಡಲು ನಾವು ಯಾವಾಗಲು ಸಿದ್ಧರಾಗಿರಬೇಕು.ಹಾಗೆ ಇಂತಹ ಪ್ರವಾಸಿ ತಾಣವನ್ನ ಹಾಳುಮಾಡುವ ಯಾವುದೇ ಕುಕೃತ್ಯ ಕಂಡುಬಂದಲ್ಲಿ ನಾವು ಎಚ್ಛೆತ್ತುಕೊಳ್ಳಬೇಕು . ಈ ಸುಂದರ ಫಾಲ್ಸ್ ಕೂಡ ಒಂದು ಸುಂದರ ಪ್ರವಾಸಿ ಸ್ಥಳದಲ್ಲಿ ಒಂದಾಗಬೇಕು ಎನ್ನುವದೇ ನನ್ನ ಆಶಯ .

ನಿಮ್ಮ ಸಂಚಾರಿ ಮಿತ್ರ..

ವನ್ನಳ್ಳಿ ಬೀಚ್ (Vannalli Beach)

ಸೂರ್ಯದೇವ ತನ್ನ ಅಂದಿನ ಕಾರ್ಯಮುಗಿಸಿ ಪಡುವಣ ಶರಧಿಯಲ್ಲಿ ಮೀಯುವ ತವಕ ಎಂಬಂತೆ ಕಡಲಂಚಿಗೆ ಸಾಗಿದ್ದ .ರವಿಯ ಕೆಂಬಣ್ಣದ ಓಕುಳಿ ಬಾನಲ್ಲಿ ತುಂಬಿ ತನ್ನ ತೆಕ್ಕೆಗೆ ಬಂದ ಎಲ್ಲವನ್ನು ಕೆಂಪಾಗಿಸಿತ್ತು .ಪಕ್ಷಿಗಳೆಲ್ಲ ತಮ್ಮ ಮನೆ ಮಕ್ಕಳು ನೆನಪಾಗಿ ತಾಮುಂದೆ ತಾಮುಂದೆ ಎಂಬ ಪೈಪೋಟಿಗೆ ಇಳಿದಂತೆ ಬಾನಿಗೆ ಹಾರಹಾಕಿದಂತೆ ವೇಗವಾಗಿ ಹಾರುತ್ತಿದ್ದವು .ಇತ್ತ ಕಡಲರಾಜ ಸೂರ್ಯನ ಆಗಮನಕ್ಕೆ ಸರ್ವತಯಾರಿ ನಡೆಸಿದಂತಿತ್ತು . ಶರಧಿಯ ನೀರು ಕೆಂಪು ಹಳದಿ ಮಿಶ್ರಿತವಾಗಿ ತೆರೆ ನೊರೆಯಾಗಿ ಕುಣಿದು ಕುಪ್ಪಳಿಸಿ ದಡ ಸೇರಿ ಮರಳು ಬೆಳಕು ನೆರಳಿನಾಟ ಅವ್ಯಾಹತವಾಗಿ ನಡೆದಿತ್ತು ..

Click Here for more Pics : ವನ್ನಳ್ಳಿ ಬೀಚ್ (Vannalli Beach) Photo Gallery.

ಕ್ಷಮಿಸಿ , ನಾನು ಏನು ಹೇಳಬೇಕೆಂದು ಬಯಸಿ ಈ ಲೇಖನ ಆರಂಭಿಸಿದೆನೋ ಅದೇ ಮರೆತು ಹೋಯಿತು . ಇಂತಹ ಮನಮೋಹಕ ದೃಶ್ಯ ಕಂಡು ಬಂದಿದ್ದು ಬೇರೆಲ್ಲಿಯೂ ಅಲ್ಲ .ಕುಮಟಾದ ವನ್ನಳ್ಳಿ ಬೀಚ್ ನಲ್ಲಿ. ನಮ್ಮನ್ನ ಸುಮಾರ ೨೦೦ ವರ್ಷ ಆಳಿದ ಬ್ರಿಟಿಷರ ಕಾಲದಿಂದಲೂ ವ್ಯಾಪಾರ ವಹಿವಾಟು ಹಡಗು ನಿಲುಗಡೆ ಗೆ ಹೆಡ್ ಬಂದರ್ ಎಂದೇ ಹೆಸರಾಗಿರುವ ಈ ನಮ್ಮ ವನ್ನಳ್ಳಿ ಬೀಚ್ ನಮ್ಮ ಊರು ಕುಮಟಾದ ಹೆಮ್ಮೆಯ ಪ್ರವಾಸಿ ತಾಣಗಳಲ್ಲಿ ಒಂದು.

ನೀವು ಈ ಬೀಚ್ ಗೆ ಹೋಗುವಾಗ ನಿಮಗೆ ಒಂದು ಚಿಕ್ಕ ಬ್ರಿಡ್ಜ್ ಸಿಗುತ್ತದೆ .ಆ ಬ್ರಿಡ್ಜ್ ಗು ಕೂಡ ತುಂಬಾ ಮಹತ್ವದ ಇತಿಹಾಸವಿದೆ .ಸಮುದ್ರದ ನೀರು ಒಳನುಗ್ಗಿ ಕೊಡಿಯಾಗಿ ಅಳ್ವೆದಂಡೇ ,ಶಶಿಹಿತ್ಲ ಹೀಗೆ ಈ ಊರಿನ ಮದ್ಯೆ ಹರಿದು ವನ್ನಳ್ಳಿ ಯನ್ನ ಬೇರ್ಪಡಿಸಿತ್ತು .ವನ್ನಳ್ಳಿ ಗೆ ಹೋಗಬೇಕೆಂದರೆ ಸಶಿಹಿತ್ತಲದ ಮುಂದೆ ಕೊಡಿ (ನೀರು ತುಂಬಿದ ಹಳ್ಳ) ದಾಟಿಯೇ ಹೋಗಬೇಕಿತ್ತು .ಇದರಿಂದ ಅಂದಿನ ಆಡಳಿತಗಾರರಿಗೆ ತುಂಬಾ ತಲೆ ನೋವು ಎನ್ನಿಸಿತ್ತು . ಆ ಹಳ್ಳಕ್ಕೆ ಅಂದಿನ ಬ್ರಿಟಿಷ್ ಸರ್ಕಾರ ಡಿಸೆಂಬರ್ ೧೮೭೯ ರಲ್ಲಿ ಸೇತುವೆ ನಿರ್ಮಿಸುವ ಕಾರ್ಯವನ್ನ ಮುನ್ಸಿಪಾಲಿಟಿ ಛೇರ್ಮನ್ ಈ..ಮೆಕೆಂಝಿಯೇ ಎನ್ನುವ ಇಂಜಿನಿಯರ್ ಗೆ ವಹಿಸಿತ್ತು . ಅವರು ಆ ಕೆಲಸವನ್ನು ಡಿಸೆಂಬರ್ ೧೮೭೯ ರಲ್ಲಿ ಪ್ರಾರಂಭಿಸಿ ಮೇ ೧೮೮೦ ರಲ್ಲಿ ಯಶಸ್ವಿಯಾಗಿ ಮುಗಿಸಿರುತ್ತಾರೆ. ಅದಕ್ಕೆ ಅಂದು ತಗುಲಿದ ವೆಚ್ಚ ಕೇವಲ ೪೪೦೦ ರೂಪಾಯಿ . ಇಂದಿನ ಕೋಟಿಗಟ್ಟಲೆ ಖರ್ಚಿನ ಬ್ರಿಡ್ಜ್ ಗಳು ಹತ್ತಾರುವರ್ಷಗಳಿಗೆ ಮುಪ್ಪುಬಂದು ಬೆಪ್ಪಾಗಿ ಉರುಳಿದ ಉದಾಹರಣೆ ಇವೆ. ಆದರೆ ಈ ನಮ್ಮ ವನ್ನಳ್ಳಿ ಬ್ರಿಡ್ಜ್ ಸರಿಸುಮಾರು ೧೪೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ . ಇಲ್ಲಿ ನಾವು ಅಂದಿನ ಅಧಿಕಾರಿಯ ಕಾರ್ಯವೈಖರಿಯನ್ನು ಖಂಡಿತ ಪ್ರಶಂಶಿಸಬೇಕು .

ಕಡಲ ನೀರಿನ ಮಂದ ಅಲೆಗಳು ದಡಕ್ಕಪ್ಪಳಿಸಿ ನಾನಿಂತಲ್ಲಿ ಬಂದು ಹಿಂದಿರುಗುವಾಗ ಪಾದದ ಬುಡದಲ್ಲಿನ ಮರಳನ್ನು ಕೊರೆದು ಕಚಕುಳಿ ಇಡುವಾಗಲೇ ವಾಸ್ತವ್ಯಕ್ಕೆ ಬಂದೆ . ಕೆಲ ಬೆಸ್ತರು ಕಡಲ ನೀರಿನ ನಡುವಲ್ಲಿ ನಿಂತು ಬಲೆಬೀಸಿ ಅಂದಿನ ತುತ್ತಿನ ಚೀಲ ತುಂಬಿಕೊಡು ಎಂದು ಕುಬೇರನನ್ನು ಕೇಳುವಂತಿತ್ತು .

ಈ ಪ್ರಕ್ರತಿ ಮಾತೆ ನಮಗೆ ಏನೆಲ್ಲ ನೀಡಿದೆ . ಇಂದಿನ ನಾಗರೀಕತೆಯ ಕೆಲಸದ ಒತ್ತಡಗಳು ,ಸಂಸಾರದ ಬಿಡುಗುಗಳು ,ವ್ಯಾವಹಾರಿಕ ಚಿಂತನೆಗಳು ವಾಮನ ಬಲಿಯನ್ನು ತುಳಿದಂತೆ ತುಳಿಯುತಿದ್ದರೂ ಸರ್ವಜೀವಿಗಳ ತಾಯಿ ಪ್ರಕೃತಿ ಮಡಿಲಲ್ಲಿ ಕಾಲಕಳೆದರೆ ಚಿಂತೆದೂರಾಗಿ ನವ ಚೈತನ್ಯ ಮೂಡುವಲ್ಲಿ ಎರಡು ಮಾತಿಲ್ಲ.

ಸಂಚಾರಿ ಮಿತ್ರ.

ಜೀವನದಿ ಅಘನಾಶಿನಿ ( Aghanashini ) .

ಶಿರಸಿ ನಗರದ ಹೆಸರನ್ನು ಕೇಳದವರೇ ವಿರಳ . ಕರ್ನಾಟಕದ ಅತಿದೊಡ್ಡ ಜಾತ್ರೆಯಲ್ಲಿ ಶಿರಸಿಯ ಸಿರಿದೇವಿ ಮಾರಿಕಾಂಬೆಯ ಜಾತ್ರೆಯು ಒಂದು. ನಾನೀಗ ಹೇಳಹೊರಟಿರುವದು ಜಾತ್ರೆಯ ಬಗ್ಗೆ ಅಲ್ಲ.ಆದರೆ ಶಿರ್ಶಿ ನಗರದ ಶಂಕರ ಹೊಂಡವನ್ನ ತನ್ನ ತವರು ಮನೆಯಾಗಿ ಮಾಡಿಕೊಂಡ ನನ್ನೂರ ಜೀವನದಿ ಅಘನಾಶಿನಿಯ ಬಗ್ಗೆ.

ಶಂಕರ ಹೊಂಡ ಎಂಬ ಕೆರೆಯಿಂದ ಉದ್ಭವವಾಗಿ ಹರಿಯುತ್ತ ತನ್ನೊಂದಿಗೆ ಸಣ್ಣ ಪುಟ್ಟ ಝರಿ ಹಳ್ಳಗಳೊಂದಿಗೆ ಮೈದುಂಭಿಕೊಳ್ಳುತ್ತ ಮಲೆನಾಡಿನ ಧಟ್ಟ ಅರಣ್ಯಗಳಲ್ಲಿ ಬಳಕುತ್ತಾ ಹೆಬ್ಬಂಡೆಗಳ ಮದ್ಯೆ ನೊರೆಕಾರಿ ಭೋಗರೆಯುತ್ತ ಸಾಗುವ ಈ ನದಿ ತನ್ನ ದಂಡೆಗುಂಟ ಕೋಟ್ಯಂತರ ಜೀವಿಗಳ ತಾಯಿಯಾಗಿದ್ದಾಳೆ . ನೂರಾರು ಬಗೆಯ ಔಷದ ಸಸ್ಯಗಳು ,ಅಪರೂಪದ ಸಸ್ಯ ಸಂಕುಲ ಇವಳ ಮಡಿಲಲ್ಲಿವೆ . ಇವಳು ಸಾಗುವ ದಟ್ಟಾರಣ್ಯಗಳಲ್ಲಿ ಅಪರೂಪದ ಪ್ರಾಣಿ ಸಂಕುಲ ,ಪಕ್ಷಿಗಳು ಇವೆ . ಸಿಂಹದ ಬಾಲದ ಸಿಂಗಳೀಕ ಕಪ್ಪು ಚಿರತೆ ಇಂತಹ ಜೀವಿಗಳನ್ನು ಇಲ್ಲಿ ಮಾತ್ರ ನೋಡಬಹುದು .

ಬಿರಿ ಬೇಸಿಗೆಯಲ್ಲಿ ಕೃಶಕಾಯವಾಗುವ ಈ ನದಿ ಮಳೆಗಾಲದಲ್ಲಿ ಸೊಕ್ಕಿ ಉಕ್ಕಿ ಮೈದುಂಬಿ ಹರಿಯುತ್ತದೆ . ಈ ಸಮಯದಲ್ಲಿ ನದಿಯ ದಂಡೆಯಲ್ಲಿ ಬರುವ ಊರುಗಳಾದ ದಿವಗಿ , ಹೆಗಡೆ,ಮಿರ್ಜಾನ ,ಮಾಸೂರು ಗಳಲ್ಲಿ ಹೊಲ ಮನೆಗಳಿಗೆ ನೀರು ನುಗ್ಗುವದು ಉಂಟು.

Click Here for more Pics : ಅಘನಾಶಿನಿ ( Aghanashini ) Photo Gallery .

ಅಘನಾಶಿನಿ ಕೇವಲ ನದಿಯಲ್ಲ . ಇಲ್ಲಿನ ಜನರ ಬದುಕು . ತನ್ನೊಡಲಲ್ಲಿ ನೂರಾರು ಬಗೆಯ ಮೀನುಗಳು ,ರುಚಿಯಾದ ಶಿಗಡಿ , ಬೆಳಚುಗಳಿಂದಾಗಿ ಇಲ್ಲಿನ ಬೆಸ್ತರಿಗೆ ತುತ್ತಿನ ಚೀಲ ತುಂಬುವ ದಾರಿಯಾಗಿದ್ದಾಳೆ . ರೈತರಿಗೆ ಅನ್ನಪೂರ್ಣೆಯಾಗಿ ಬೆಳೆಗಳಿಗೆ ನೀರೊದಗಿಸುತ್ತಿದ್ದಾಳೆ . ಹರಿಯುತ್ತ ಹರಿಯುತ್ತ ಎರಡು ಕವಲಾಗಿ ಹರಿದು ಐಗಳ ಕೂರ್ವೆ ಎಂಬ ಊರನ್ನು ದ್ವೀಪವಾಗಿಸುವ ಈ ನದಿ ದಂಡೆಯಲ್ಲಿ ತನ್ನ ನಂಬಿರುವ ಸಾವಿರಾರು ಭಕ್ತರ ಪಾಲಿನ ಜೀವಂತ ದೈವ ಪ್ರಸಿದ್ಧ ಬಬ್ರು ಲಿಂಗೇಶ್ವರ ದೇವಸ್ಥಾನವಿದೆ . ಇಲ್ಲಿನ ಕಾಂಡ್ಲಾ ಸಸ್ಯಪ್ರದೇಶ ವಿವಿಧ ಬಗೆಯ ಕೊಕ್ಕರೆ ಗಿಡುಗ ಮುಂತಾದ ಪಕ್ಷಿಗಳ ಆಶ್ರಯಧಾಮವಾಗಿದೆ . ವಿದೇಶಗಳಿಂದಲೂ ಇಲ್ಲಿಗೆ ಕಪ್ಪುತಲೆಯ ದೊಡ್ಡಗಾತ್ರದ ಕೊಕ್ಕರೆಗಳು ಬರುತ್ತವೆ . ಇಲ್ಲಿಂದ ಮಂದಗಮನೆಯಾಗಿ ಮುಂದೆಸಾಗುವ ಅಘನಾಶಿನಿ ತದಡಿ ಬಳಿ ಸಮುದ್ರ ಸೇರಿ ಕೊಳ್ಳುತ್ತಾಳೆ . ಇದರಿಂದಾಗಿ ತದಡಿ ಮೀನುಗಾರಿಕಾ ಬಂದರಾಗಿ ಹೊರಹೊಮ್ಮಿದೆ. ಕುಮಟಾ ಹೊನ್ನಾವರ ಜನರ ದಾಹ ತಣಿಸುವ ಜೀವ ಜಲವಾದ ಈ ನನ್ನೂರಿನ ನದಿ ಅಘನಾಶಿಗೆ ಕೋಟಿ ಕೋಟಿ ಪ್ರಣಾಮ.

ಸಂಚಾರಿ ಮಿತ್ರ.

ಗೋವಿಂದ ತೀರ್ಥ ,ಮೂಡ್ಲುಗಲ್ಲು ,ಹಾಲಾಡಿ ನದಿ ಸೋಮೇಶ್ವರ ಬೀಚ್ ಪ್ರಯಾಣದ ಅನುಭವ . (Govinda Teerta ,Mudlugallu ,Haladi River and Someshwara Beach travel experiance.)

ಇದು ಕೂಡ ಒಂತರ ಹಠಾತ್ತಾಗಿ  ಪ್ಲಾನ್ ಆಧ ಟ್ರಿಪ್ ಅಂತಾನೆ ಹೇಳಬಹುದು . ಪ್ಲಾನ್ ಆಗಿದ್ದು ಕೇವಲ ಗೋವಿಂದ ತೀರ್ಥ ಮತ್ತು ಹತ್ತಿರದ ದೇವಸ್ಥಾನಕ್ಕೆ ಹೋಗಿ ಬರುವುದು ಅಂತ . ಆ ದೇವಸ್ಥಾನದ ಸ್ಥಾನದ ಹೆಸರು ಕೂಡ ಅಲ್ಲಿಗೆ ಹೋಗುವವರಿಗೆ ಗೊತ್ತಿರಲಿಲ್ಲ ನನಗೆ.  ನಿಜ ಹೇಳಬೇಕೆಂದರೆ ನಮ್ಮ ಅಣ್ಣನಿಗೂ  ಆ ದೇವಸ್ಥಾನದ ಬಗ್ಗೆ ಗೊತ್ತಿರಲಿಲ್ಲ ಅಂದೆನಿಸುತ್ತದೆ . ಹತ್ತಿರದಲ್ಲಿರುವ ಅಣ್ಣನ ಸ್ನೇಹಿತ ನ್ನು  ಕರೆದುಕೊಂಡು ಅವನ ಸಲಹೆಯೊಂದಿಗೆ ಹೋಗೋಣ ಎನ್ನುವುದು ಅವನ ಉಪಾಯ. ಆದರೆ ಅಲ್ಲಿ ಹೋಗಿ ಬರುವ ವೇಳೆ ನಾನು ಮತ್ತು ಅಣ್ಣ ಕೊಲ್ಲೂರು ,ಹಾಲಾಡಿ ರಿವರ್ ಮತ್ತು ಸೋಮೇಶ್ವರ ಬೀಚ್ ಗಳನ್ನು ಕೂಡ ಕವರ್   ಮಾಡಿದೆವು.

ಬೆಳಿಗ್ಗೆ ೬ ಗಂಟೆಗೆ ನಮ್ಮ ಪ್ರಯಾಣ ಆರಂಭಿಸಿದೆವು .ನನ್ನೂರು ಕುಮಟಾ ಆದ್ದರಿಂದ ಬೈಂದೂರ್ ಹೋಗಬೇಕು ಅಂದರೆ ಹೊನ್ನಾವರ ,ಮುರ್ಡೇಶ್ವರ ,ಭಟ್ಕಳ ಇವೆಲ್ಲ ಊರುಗಳನ್ನು ದಾಟಿ ಹೋಗಬೇಕಾಗುತ್ತದೆ. ಸರಿಯಾಗಿ ೬. ೩೦ . ಆಗ ನಾವು ಹೊನ್ನಾವರ ಶರಾವತಿ ಬ್ರಿಜ್ ಕ್ರಾಸ್ ಮಾಡ್ತಾ ಇದ್ವಿ . ಎಂತ ಅದೃಷ್ಟ ,ಅದೇ ಸಮಯಕ್ಕೆ ಸೂರ್ಯೋದಯದ ಸುಂದರ ದ್ರಶ್ಯ ನಮ್ಮಕಣ್ಮುಂದೆ. ಹಾಗೆ ಹೋಗ್ತಾ ನಾನು ವಿಡಿಯೋ ಕೂಡ ತೆಗೆದುಕೊಂಡೆ. ಸೂರ್ಯನ ಹೊಂಗಿರಣಗಳು ನಮ್ಮ ಮೇಲೆ ಬೀಳ್ಬೇಕಾದರೆ ನನ್ನಲಿ ಏನೋ ಒಂತರ ಸಂತೋಷ. ಏನೋ ಹೊಸ ಚೈತನ್ಯ ಅಂತಾನೆ ಹೇಳ್ಬಹುದು. ನೀವು ಆ ದ್ರಶ್ಯವನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದು.

Click here for more Pics :ಹೊನ್ನಾವರ-ಬೆಳಿಗ್ಗಿನ ಸೂರ್ಯೋದಯ -Honnavara Bridge Sunrise Photo Gallery.


ಹಾಗೆ ಪ್ರಯಾಣ ಮುಂದುವರೆಸಿ ಸುಮಾರು ೯ ಗಂಟೆ ಹೊತ್ತಿಗೆ ಅಣ್ಣನ ಸ್ನೇಹಿತನ ಮನೆ ತಲುಪಿದೆವು. ಲೈಟ್ ಆಗಿ ಟೀ ತಿಂಡಿ ಮಾಡಿ ಮತ್ತೆ ಅಲ್ಲಿಂದ ಗೋವಿಂದ ತೀರ್ಥದ  ಕಡೆ ನಮ್ಮ ಪ್ರಯಾಣ ಮುಂದುವರೆಸಿದೆವು. ಇಲ್ಲೊಂದು ವಿಷಯ ನಾನು ಹೇಳಲೇಬೇಕು. ಮೊದಲೇ ಹೇಳಿದ ಹಾಗೆ ಅಣ್ಣನ ಸ್ನೇಹಿತನ ಸಹಾಯದೊಂದಿದೆ ಅಲ್ಲಿ ಹೋಗಬೇಕೆನ್ನುವುದು ನಮ್ಮ ಪ್ಲಾನ್. ಯಾಕಂದರೆ ಆ ಸ್ಥಳ ನಮಗೆ ಅಪರಿಚಿತ. ಆದರೆ ಅಲ್ಲಿ ಆಗಿದ್ದೆ ಬೇರೆ. ಅಣ್ಣನ ಸ್ನೇಹಿತನಿಗೂ ಆ ಸ್ಥಳ ಸರಿಯಾಗಿ ಗೊತ್ತಿರಲಿಲ್ಲ. ಅಲ್ಲಿ ನಮ್ಮ ಸಹಾಯಕ್ಕೆ ಬಂದವರು ಇನ್ನೊಬ್ಬ ವ್ಯಕ್ತಿ. ಅವ್ರು ಅಣ್ಣನ ಸ್ನೇಹಿತನ ಭಾವ. ನಿಜವಾಗಿಯೂ ನಮಗೆ ದಾರಿಯುದ್ದಕ್ಕೂ ದಿಕ್ಷುಚಿಯಂತೆ ಕೆಲಸ ಮಾಡಿದರು ಅವರು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರು ಅದು ಕಡಿಮೆ.
ಸ್ವಲ್ಪವೇ ಸಮಯದಲ್ಲಿ ನಾವು ಯಾವುದೊ ದಟ್ಟ ಕಾಡುಗಳ ಅಂಚಲ್ಲಿ ಇದ್ದೆವು .ದೂರದಲ್ಲಿ ಕಾಣುತ್ತಿರುವ ಗುಡ್ಡಬೆಟ್ಟಗಳು ,ಕಿರಿದಾದ ಕಾಲು ದಾರಿ  ಇದನ್ನೆಲ್ಲಾ ನೋಡಿ ನನಗೆ ಒಂದು ಕ್ಷಣ ಎಲ್ಲಿ ಇದ್ದೇನೆ ಅನ್ನೋದೇ ಗೊತ್ತಾಗದಂತಾಯಿತು. ನಂತರ ನಮ್ಮ ಮಿತ್ರನನ್ನು ಕೇಳಿದಾಗ  ಅವರು ಹೇಳಿದರು,ನಾವು ಹೋಗಬೇಕಾಗಿರುವದು ಆ ಗುಡ್ಡದ ಕೆಳಗೆ ಅಂತ.ಆ ಕ್ಷಣಕ್ಕೆ ನಾ ಅಂದುಕೊಂಡೆ ಗುಡ್ಡದ ಕೆಳಗೆ ತಾನೇ ಆರಾಮಾಗಿ ಹೋಗಬಹುದು ಅಂತ. ನಂತರ ಗೊತ್ತಾಯಿತು ಇದು ಒಂದು  ಟ್ರೆಕಿಂಗ್ ಪ್ಲೇಸ್ , ೨ ಕಿಲೋಮೀಟರು ಹತ್ತಬೇಕು ಅಂತ.
ನಾವು ಹೊರಟ್ಟಿದ್ದು ಕೊಡಚಾದ್ರಿಯ ಇನ್ನೊಂದು ಅಂಚಿನಲ್ಲಿರುವ ಒಂದು ಪವಿತ್ರ ಸ್ಥಳಕ್ಕೆ ಆಗಿತ್ತು. ಅದೇ ಗೋವಿಂದ ತೀರ್ಥ ಅಂತ ಕರೆಯಲ್ಪಡುವ ಸ್ಥಳ. ಆ ಬೆಟ್ಟದಲ್ಲಿ ಹತ್ತಬೇಕಾದರೆ ನನ್ನ ಅವಸ್ಥೆ ಯಾರಿಗೂ ಬೇಡ. ಆದರೆ ಇದೊಂದು ಒಳ್ಳೆಯ ಅನುಭವ ನಿಜ ಹೇಳಬೇಕು ಅಂದ್ರೆ.  ಮತ್ತೆ ನನಗೆ ಅಲ್ಲಿ ತಿಳಿದು ಕೊಳ್ಳೋದು ತುಂಬನೆ ಇದೆ ಅನ್ನಿಸ್ತು. ಅಲ್ಲಿ ಯಾವುದೇ ದಾರಿ ಇಲ್ಲ. ದಾರಿಹೋಕರು ಮಾಡಿಕೊಂಡ ಕಾಡಿನ ದಾರಿ ಮಾತ್ರ.ಅದರಲ್ಲೇ ಪ್ರಯಾಣ ಮುಂದುವರೆಸಿದೆವು. ಅಲ್ಲಿ ನಂಗೆ ಇನ್ನೊಂದು ವಿಷಯ  ಗಮನಕ್ಕೆ ಬಂತು. ಬೆಂಗಳೂರಿನ ಜೀವನಕ್ಕೂ ಮತ್ತು ಹಳ್ಳಿಯ ಜೀವನದ ವ್ಯತ್ಯಾಸದ ಅರಿವು  .ಸ್ವಲ್ಪವೇ ಸ್ವಲ್ಪ ನಡೆದು ನಾನು ಸುಸ್ತಾಗಿ ಕುಳಿತುಕೊಳ್ಳುವಾಗ, ನನ್ನ ಓವರ್ಟೇಕ್ ಮಾಡಿಕೊಂಡು ಹೆಂಗಸರು ಮಕ್ಕಳು ಹೋಗುವಾಗ ಅಣ್ಣನ ಹತ್ತಿರ ಕೇಳಿದೆ. ಇದು ಹೇಗೆ ಸಾಧ್ಯ ಅಂತ. ಅವನು ಮುಗುಳ್ನಗುತ್ತ ಹೇಳಿದ ಸಿಂಪಲ್ ಅವರ ಜೀವನಶೈಲಿ ಮತ್ತು ಆಹಾರ ಇದೆಲ್ಲ ಅವರನ್ನ ಇಷ್ಟೊಂದು ಸ್ಟ್ರಾಂಗ್ ಮಾಡಿದೆ ಅಂತ. ನಿಜ ಅಂತ ಅನ್ನಿಸಿತು ನನಗೆ .ಒಂದು ಕ್ಷಣ ಮನ್ನಸ್ಸಿಗೆ ಬೇಸರವೂ ಅನ್ನಿಸಿತು. ನನ್ನ ಹಳ್ಳಿ  ಚೆನ್ನಾಗಿದೆ ಅದನ್ನೆಲ್ಲ ಬಿಟ್ಟು ನಾವು ಬೆಂಗಳೂರಿನಲ್ಲಿ ಆಧುನಿಕತೆಯ ಮದ್ಯದಲ್ಲಿ ಸಿಲುಕಿ ಒದ್ದಾಡುತಿದ್ದೇನೆ ಅಂತ ಅನ್ನಿಸಿತು. ಆದರೆ ಜೀವನ ನೇ ಹೀಗೆ .ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ…
ಅದೇನೇ ಇರಲಿ ಛಲಬಿಡದೆ ಅಂತೂ ಇಂತೂ ಮಾಡಿ ನಾವು ಕೊನೆಗೂ ಆ ಗುಡ್ಡದ ಕೆಳಗೆ ತಲುಪಿದೆವು .ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ  ಜನ ನೆರೆದಿದ್ದರು. ಕಡಿದಾದ ಗುಡ್ಡದ ಮೇಲಿಂದ ಚಿಲುಮೆ ಸುರಿಯುತ್ತಿತ್ತು.. ಆ ಗುಡ್ಡದ ಮೇಲಿಂದ ದೂರದಲ್ಲಿ ಚಿಕ್ಕದಾಗಿ ಕಾಣುತ್ತಿರುವ ಗಿರಿ ಕಾಡು ಊರು ಎಲ್ಲವೂ ನೋಡೋಕೆ ಏನೋ ಒಂತರ ಆನಂದ ಉಂಟು ಮಾಡುತಿತ್ತು. ಈ ಕೆಳಗಿನ ಲಿಂಕ್ ನಲ್ಲಿ ನೀವು ಆ ರಮಣೀಯ ಸೌಂದರ್ಯವನ್ನು ವೀಕ್ಷಿಸಬಹುದು. ಮೇಲ್ಗಡೆಯಿಂದ ಸುರಿಯುವ ನೀರು ಆ ಬಿಸಿಲಿನ ಧಗೆಗೆ ಏನೋ  ಒಂತರ ಹಿತ  ನೀಡುತಿತ್ತು .ನಿಜ ಹೇಳಬೇಕು ಅಂದರೆ ಇದೊಂದು ಬೇರೆ ತರದ ಅನುಭವ. ಅದಕ್ಕೆ ಇರಬಹುದು ಇದನ್ನು ತೀರ್ಥ ಅಂತ ಕರೆಯೋದು. ಇಂತಹ ಅನುಭವ ನಿಮಗೆ ಎಲ್ಲೇ ಹೋದರು ಸಿಗಲಾರದು.


Click here for more Pics : ಗೋವಿಂದ ತೀರ್ಥ (Govinda teerta) Photo Gallery .


ಅಲ್ಲಿಂದ ಬರಲಿಕ್ಕೆ ಮನಸ್ಸಿಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು .ದಾರಿಯಲ್ಲಿ ಬರಬೇಕಾದರೆ ಯಾರೋ ನಮ್ಮನ್ನು ಕೂಗಿ ಮಜ್ಜಿಗೆ ವ್ಯವಸ್ಥೆ ಮಾಡಿದ್ದೇವೆ ಕೆಳಗೆ.ಹೋಗಿ ದಯವಿಟ್ಟು ಕುಡಿಯಿರಿ ಎಂದರು. ನಮಗೆ ಅಷ್ಟೇ ಬೇಕಾಗಿತ್ತು. ಗಡಿಬಿಡಿಯಿಂದ  ಕೆಳಗೆ ಬಂದು ಮೊದಲು ಮಜ್ಜಿಗೆ ಕುಡಿದೆವು. ಅಬ್ಬಾ, ದಣಿವಾರಿಸಿಕೊಳ್ಳಲು ಸಹಾಯ ಮಾಡಿದ ಆ ವ್ಯಕ್ತಿಗೆ ನಮ್ಮ ಧನ್ಯವಾದ ಹೇಳಿ ಅಲ್ಲಿಂದ ಹೊರಟೆವು .
ನಂತರ ನಮ್ಮ ಪ್ರಯಾಣ ಮೂಡ್ಲುಗಲ್ಲು ಕೇಶವ ನಾಥ ಸ್ವಾಮಿ ದೇವಾಲಯದ ಕಡೆಗೆ ಹೊರಟಿತು . ಈ ದೇವಾಲಯದಲ್ಲೊಂದು ವಿಶೇಷತೆ ಇದೆ .ಸುಮಾರು ೧೦೦ ಫೀಟ್ ದೂರ ಗುಹೆಯಲ್ಲಿ ದೇವರ ಮೂರ್ತಿ ಇದೆ. ಗುಹೆ ಯಲ್ಲಿ ನೀರು ಇದೆ.ಭಕ್ತರು ನೀರಿನಲ್ಲಿ ನಡೆದುಕೊಂಡು ಹೋಗಬೇಕು.ನೀವು ಕೆಳಗಿನ ಚಿತ್ರದಲ್ಲಿ ನೋಡಿದರೆ ನಿಮಗೆ ಅದರ ಕಲ್ಪನೆ ಬರಬಹುದು.


Click here for more Pics :ಮೂಡುಗಲ್ಲುಕೇಶವನಾಥ ದೇವಸ್ಥಾನ ( Mudugallu Keshavanatha Temple)Photo Gallery.

ಇದು ಒಂದು ಯುನಿಕ್ ಅಂತಾನೆ ಹೇಳಬಹುದು. ಇಂತಹ ದೇವಸ್ಥಾನ ಇದೆ ಮೊದಲ ಬಾರಿಗೆ ನಾ ನೋಡಿದ್ದು.ದೇವರ ದರ್ಶನ ಪಡೆದ ನಮಗೆ ಅಲ್ಲಿ ಆ ದಿನ ಜಾತ್ರೆ ಇದ್ದದ್ದು ತಿಳಿದು ಬಂತು. ಹಾಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇದ್ದುದರಿಂದ ಅಲ್ಲೇ ಊಟ ಮಾಡಿ ನಮ್ಮ ಪ್ರಯಾಣ ಮುಂದುವರೆಸಿದೆವು.
ದಾರಿಯಲ್ಲಿ ಹಾಲಡಿ ಹತ್ತಿರ ದಾರಿಯಲ್ಲಿ ಹೋಗಬೇಕಾದರೆ ಒಂದು ನದಿ ಇರುವದು ಗೊತ್ತಾಯಿತು. ಅಲ್ಲಿ ಕಾರ್ ಅನ್ನು ನಿಲ್ಲಿಸಿ ನದಿಗೆ ದುಮುಕಿದೆವು.. ಅಲ್ಲಿನ ಪ್ರಕೃತಿ ಸೌಂದರ್ಯ ವನ್ನ ನನ್ನ ಮಾತಿನಲ್ಲಿ ಕೇಳುವದಕಿಂತ ಚಿತ್ರದಲ್ಲಿ ನೋಡಿದರೆ ಇನ್ನು ಚೆನ್ನಾಗಿರತ್ತೆ.


Click here for more Pics : ಹಾಲಾಡಿ ನದಿ ( Haladi River ) Photo Gallery.

ನಂತರ ಸ್ವಲ್ಪ ಸಮಯ ಅಲ್ಲಿ ಕಳೆದು ಅಣ್ಣನ  ಸ್ನೇಹಿತರನ್ನು ಅವರ  ಮನೆಗೆ ಬಿಟ್ಟು ಅವರಿಗೆಲ್ಲ ಧನ್ಯವಾದ ಹೇಳಿ ಅಲ್ಲಿಂದ ಕೊಲ್ಲೂರು ಕಡೆಗೆ ಹೊರಟೆವು.
ಮೊದಲ ಬಾರಿಗೆ ನಾನು ಕೊಲ್ಲೂರು ಹೋಗುತ್ತಾ ಇರುವದು. ದೇವಸ್ಥಾನ ತುಂಬಾ  ಚೆನ್ನಾಗಿದೆ.ನಾವು ಹೋಗಿದ್ದು ಸುಮಾರು ೪ ಗಂಟೆ ಸಮಯ ಆದುದರಿಂದ ಜಾಸ್ತಿ ಭಕ್ತಾದಿಗಳು ಇರಲಿಲ್ಲ.  ತಾಯಿ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ನಾವು ತಡಮಾಡದೆ ಮನೆ ಕಡೆಗೆ ಹೊರಟೆವು.
ಆಗ  ೫ ಗಂಟೆ ಸಮಯ. ಹತ್ತಿರದಲ್ಲೇ ಇರುವ ಸೋಮೇಶ್ವರ ಬೀಚ್ ಅಲ್ಲಿ ಸನ್ಸೆಟ್ ವೀಕ್ಷಣೆ ಮಾಡಬೇಕೆನ್ನುವ ಪ್ಲಾನ್ ನಮ್ಮದು . ಸರಿಯಾಗಿ ೬ ಗಂಟೆ ಹೊತ್ತಿಗೆ ಸೋಮೇಶ್ವರ ಬೀಚ್ ತಲುಪಿದ ನಾವು ಮೊದಲು ಸೋಮೇಶ್ವರ ದೇವಸ್ಥಾನ ಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡೆವು. ನಂತರ ಬೀಚ್ ನಲ್ಲಿ ಕೂತು ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡು ಸನ್ಸೆಟ್ ಗಾಗಿ ಕಾಯುತ್ತ ಕುಳಿತೆವು. ಅಂದೇ ನಾನು ಅಷ್ಟೊಂದು ತಾಳ್ಮೆಯಿಂದ ಕಾದಿದ್ದು ಅನ್ನಿಸುತ್ತದೆ .ಆ ನನ್ನ ತಾಳ್ಮೆ ನನಗೆ ತುಂಬಾ ಒಳ್ಳೆಯ ಅನುಭವವನ್ನ ತಂದಿತ್ತು ಆದಿನ . ಯಾಕೆ ಅಂತ ಕೇಳಬೇಡಿ. ನಾನು ತೆಗೆದಂತ ಈ ಚಿತ್ರಣಗಳೇ ಅದಕ್ಕೆ ಸಾಕ್ಷಿ. 


Click here for more Pics : ಸೋಮೇಶ್ವರ ಬೀಚ್ – ಸೂರ್ಯಾಸ್ತ (Someshwara Beach Sunset ) Photo Gallery.

ಅಲ್ಲಿಗೆ ನಮ್ಮ ಪ್ರವಾಸ ಮುಕ್ತಾಯವಾಯಿತು. ದಾರಿಯುದ್ದಕ್ಕೂ ಏನೇನೊ ಯೋಚನೆ. ಈ ನಮ್ಮ ಪ್ರವಾಸದಲ್ಲಿ ಎಷ್ಟೊಂದು ಜನರನ್ನ ಭೇಟಿ ಮಾಡಿದೆವು,ಎಷ್ಟೊಂದು ಸ್ಥಳಕ್ಕೆ  ಬೆಟ್ಟಿ ಕೊಟ್ಟೆವು  .ಎಲ್ಲದರಲ್ಲೂ ಒಂದೊಂದು ವಿಭಿನ್ನತೆ ಇದೆ ಅಂತ ನಂಗೆ ಅನ್ನಿಸಿತು. ಅದಲ್ಲದೆ  ನಮಗೆ ದಿಕ್ಷುಚಿಯಂತೆ ಸಹಾಯ  ಮಾಡಿದ ಆ ವ್ಯಕ್ತಿ ,ಮತ್ತೆ ಪಾನಕ ವಿತರಣೆ ಮಾಡಿದವರು ಇವರೆಲ್ಲ ಯಾವ ಉದ್ದೇಶದಿನಂದ ನಮಗೆ ಸಹಾಯ ಮಾಡಿದರು ಅನ್ನೋ ಯೋಚನೆ ನನ್ನ ಮನಸ್ಸಿನಲ್ಲಿ. ಅದಕ್ಕೆಲ್ಲ ಉತ್ತರವನ್ನು ನಾನೇ  ಹುಡುಕಿಕೊಂಡೆ.ಅದೇ ಮನುಷ್ಯತ್ಯ. ಅವರಲ್ಲಿರುವ ಒಳ್ಳೆ ಮನಸ್ಸು ಇದೆಲ್ಲವನ್ನು ಅವರಿಂದ ಮಾಡಿಸಿತು ಅಂತ. ಇಂದಿನ  ಕಾಲದಲ್ಲಿ ಹಣವಿಲ್ಲದೆ ಒಂದು ಲೋಟ ನೀರು ಕೊಡೋಕೆ ಹಿಂದೆ ಮುಂದೆ ನೋಡೋರ ಮದ್ಯ ನನ್ನಂತ ಅಪರಿಚಿತರಿಗೆ ಇಷ್ಟೊಂದು ಆದರದಿಂದ ಸತ್ಕರಿಸಿದ ಎಲ್ಲರೂ ನನ್ನ ಮಿತ್ರರು.ನಿಜವಾದ ಸಂಚಾರಿ ಮಿತ್ರರು. 

ನಿಮ್ಮ ಸಂಚಾರಿ ಮಿತ್ರ.